ಮಂಡ್ಯ:  ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಮನ್ನಾ ಮಾಡುವ ವಿಚಾರವನ್ನು ಸಚಿವ ಸಂಪುಟದ ಮುಂದೆ ಇಟ್ಟು ತುರ್ತು ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇಂದು ಪತ್ರ ಬರೆದಿರುವಂತ ಅವರು, ಮಂಡ್ಯದ ರೈತರ ಜೀವನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಯು ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾಗಿದೆ. ದೇಶದ ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲೇ ಮೊದಲು ಎಂದರೆ, 1932 ರಲ್ಲಿ ಈ ಕಾರ್ಖಾನೆಯು ಪ್ರಾರಂಭವಾಯಿತು. ಇದು ಮಂಡ್ಯ ಜಿಲ್ಲೆಯ ಹಾಗೂ ಕರ್ನಾಟಕದ ಹೆಮ್ಮೆಯಾಗಿದೆ. ಆದರೆ, ಇದೀಗ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದರಿಂದ ಪಾರು ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದ್ದು, ಸಂಪುಟ ಸಭೆ ಕರೆದು ಬಾಕಿ ಇರುವ ವಿದ್ಯುತ್ ಬಿಲ್ 52.25 ಕೋಟಿ ರೂಪಾಯಿಯನ್ನು ಮನ್ನಾ ಮಾಡಬೇಕೆಂದು ಈ ಮೂಲಕ ಕೋರಿದ್ದಾರೆ.

ಹಲವು ವರ್ಷಗಳಿಂದ ಹಲವಾರು ಕಾರಣಗಳಿಂದಾಗಿ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯು ಕಳೆದ ವರ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ಮುತುವರ್ಜಿಯಿಂದ ಪುನರಾರಂಭಗೊಂಡಿತು. ರಾಜ್ಯ ಸರ್ಕಾರ ಕಾರ್ಖಾನೆ ಪ್ರಾರಂಭೋತ್ಸವ, ಹಾಗೂ ಗ್ಯಾಂಗ್ ಗಳಿಗೆ ನೀಡಲು 15 ಕೋಟಿ ರೂ. ದುಡಿಯುವ ಬಂಡವಾಳಕ್ಕಾಗಿ (ವರ್ಕಿಂಗ್ ಕ್ಯಾಪಿಟಲ್) 35 ಕೋಟಿ ರೂ.ಸೇರಿ ಒಟ್ಟಾರೆ 50 ಕೊಟಿ ರೂ.ಗಳನ್ನು ಕಾರ್ಖಾನೆಯ ಪುನಶ್ಚೇತನಕ್ಕೆ ನೀಡಲಾಗಿದೆ ಎಂದಿದ್ದಾರೆ.

ಪರಿಣಾಮ ಕಳೆದ ವರ್ಷ ಕಾರ್ಖಾನೆಯು ಮಂಡ್ಯದ ರೈತರು ಬೆಳೆದ 2 ಲಕ್ಷ 41 ಸಾವಿರ ಟನ್ ಕಬ್ಬನ್ನು ನುರಿಸಲಾಗಿತ್ತು. ರೈತರಿಗೆ ಕಬ್ಬಿನ ಹಣ ಪಾವತಿಯಾಗಿದೆ. ಕಾರ್ಖಾನೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ಈ ವರ್ಷ ಕನಿಷ್ಠ 2 ಲಕ್ಷ 5 ಸಾವಿರ ಟನ್ ಕಬ್ಬನ್ನು ನುರಿಸುವ ಸಂಬಂಧ ರೈತರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಕಾರ್ಖಾನೆ ಕೆಲವು ಅನಿವಾರ್ಯ ಕಾರಣಗಳಿಂದ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ. 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಕಾರ್ಖಾನೆಗೆ ನೋಟಿಸ್ ನೀಡಿದೆ. 7 ದಿನಗಳಲ್ಲಿ ವಿದ್ಯುತ್ ಪಾವತಿ ಮಾಡುವಂತೆ ಜೂನ್ 3 ರಂದೇ ನೀಡಿದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಆದರೆ, ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕೋಟ್ಯಂತರ ರೂಪಾಯಿ ನಷ್ಟದಲ್ಲಿದೆ. ಅಷ್ಟೊಂದು ಹಣವನ್ನು ವಿದ್ಯುತ್ ಬಿಲ್ ಗೆ ಪಾವತಿಸಿದರೆ, ಈ ಹಂಗಾಮಿನಲ್ಲಿ ಕಬ್ಬು ನುರಿಸುವುದೇ ಕಷ್ಟವಾಗಬಹುದು. ಇದರಿಂದ‌ ಈಗಾಗಲೇ ಕಾರ್ಖಾನೆ ನಂಬಿ ಕಬ್ಬು ಬೆಳೆದಿರುವ ರೈತರಿಗೆ ನಷ್ಟವಾಗಬಹುದು ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಂಡು ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಮಂಡ್ಯದ ರೈತರ ಪರವಾಗಿ ಈ ಮೂಲಕ ಮನವಿ ಮಾಡಿದ್ದಾರೆ.

BREAKING: ಅತ್ಯಾಚಾರ ಕೇಸ್: ಜುಲೈ.8ರವರೆಗೆ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

Share.
Exit mobile version