ಕಲಬುರಗಿ : ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಡಿಜಿಟಲೀಕರಣ ಗೊಳಿಸಲು ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಎಂಬ ಯೋಜನೆಗೆ ಮಾನ್ಯ ಪ್ರಧಾನಮಂತ್ರಿಗಳು ಇತ್ತೀಚಿಗೆ ಚಾಲನೆ ನೀಡಿದ್ದು, ಪ್ರತಿಯೊಬ್ಬರು ಈ ‘ಡಿಜಿಟಲ್ ಹೆಲ್ತ್ ಕಾರ್ಡ್’ನ್ನು ಪಡೆದುಕೊಂಡಲ್ಲಿ ವೈದ್ಯಕೀಯ ಸೇವೆ ಇನ್ನಷ್ಟು ಸುಲಭವಾಗಿ ಸಿಗಲಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ವಿವರ: ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ ಮತ್ತು ಸುರಕ್ಷಿತ ಆರೋಗ್ಯ ಸೇವೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್ನ್ನು ಬಳಸಿಕೊಂಡು ವ್ಯಕ್ತಿಯ ‘ಡಿಜಿಟಲ್ ಹೆಲ್ತ್ ಕಾರ್ಡ್’ ಅನ್ನು ರಚಿಸಲಾಗುತ್ತದೆ. ಈ ಕಾರ್ಡ್ 14 ಸಂಖ್ಯೆಯನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬರ ಆರೋಗ್ಯದ ಕುರಿತು ಮಾಹಿತಿಗಳು ಇದರಲ್ಲಿ ದೊರೆಯಲಿದೆ. ಅಂದರೆ ಕಾರ್ಡ್ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿವರ, ವೈದ್ಯರು ನೀಡಿದ ಚಿಕಿತ್ಸೆ, ಮಿಕ್ಕ ವೈದ್ಯಕೀಯ ವರದಿಗಳು, ವ್ಯಕ್ತಿ ಎದುರಿಸುತ್ತಿರುವ ಕಾಯಿಲೆಗಳು ಸೇರಿದಂತೆ ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಈ ಕಾರ್ಡ್ ಮೂಲಕ ಲಭ್ಯವಾಗಲಿದೆ.
ವೈದ್ಯರಿಗೂ ಸಹಾಯಕ: ವೈದ್ಯರನ್ನು ಭೇಟಿಯಾಗಿ ‘ಡಿಜಿಟಲ್ ಹೆಲ್ತ್ ಕಾರ್ಡ್’ನ್ನು ತೋರಿಸಿದ್ದಲ್ಲಿ ರೋಗಿಯ ಆರೋಗ್ಯದ ಎಲ್ಲಾ ಪೂರ್ವಾಪರ ಮಾಹಿತಿ ದೊರೆಯುತ್ತದೆ. ವೈದ್ಯರು ನಿಯಮಿತ ಚಿಕಿತ್ಸೆಗೆ ಒಳಪಡುವ ವ್ಯಕ್ತಿಯ ಆರೋಗ್ಯದ ಕುರಿತು ದಾಖಲೆಗಳನ್ನು ಅಗತ್ಯ ಸಂದರ್ಭದಲ್ಲಿ ಬಳಸಲು ಈ ಡಿಜಿಟಲ್ ಹೆಲ್ತ್ ಕಾರ್ಡ್’ ಸಹÀಕಾರಿಯಾಗಿದೆ. ಯಾವುದೇ ವ್ಯಕ್ತಿಯು ಆರೋಗ್ಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸದಿದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಎಲ್ಲಾ ಆಸ್ಪತ್ರೆಗಳಿಗೆ ಆನ್ವಯ: ‘ಡಿಜಿಟಲ್ ಹೆಲ್ತ್ ಕಾರ್ಡ್’ ಎಲ್ಲಾ ಆಸ್ಪತ್ರೆಗಳು, ಡಯಾಗ್ನಸ್ಟಿಕ್ ಲ್ಯಾಬೊರೇಟರಿಗಳು ಮತ್ತು ಫಾರ್ಮಸಿಗಳಿಗೆ ಅನ್ವಯವಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಇ-ಫಾರ್ಮಸಿ, ಟೆಲಿಮೆಡಿಸಿನ್ ಸೇವೆಗಳನ್ನೂ ಪ್ರಾರಂಭಿಸಲಿದೆ.