ಬೆಂಗಳೂರು: ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ಏಷ್ಯಾದ ಅತೀದೊಡ್ಡ ಮತ್ತು ಭಾರತದ ಏಕೈಕ ಸಮಾವೇಶವಾದ ‘ಡೈಡ್ಯಾಕ್ಟ್ ಇಂಡಿಯಾ’ ಬೆಂಗಳೂರಿನಲ್ಲಿ ಸೆ.21ರಿಂದ 23ರವರೆಗೆ ನಡೆಯಲಿದೆ. ಇದಕ್ಕೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಾಯೋಜಕತ್ವ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ವರ್ಷದ ಈ ಸಮಾವೇಶವು ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯಲಿದೆ. ಇಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳ 4,000ಕ್ಕೂ ಹೆಚ್ಚು ನವೀನ ಉತ್ಪನ್ನ ಹಾಗೂ ಸೇವೆ ಅನಾವರಣಗೊಳ್ಳಲಿವೆ. ಮೈಕ್ರೋಸಾಫ್ಟ್, ಅಮೆಜಾನ್, ಸ್ಯಾಮ್ಸಂಗ್, ಎಚ್.ಪಿ. ಸೇರಿದಂತೆ 20 ದೇಶಗಳ 200ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದರು.
ಸಮಾವೇಶದಲ್ಲಿ ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಪೋಲೆಂಡ್, ಸಿಂಗಾಪೂರ ಮುಂತಾದ ದೇಶಗಳ ಪ್ರತ್ಯೇಕ ಅಂತರರಾಷ್ಟ್ರೀಯ ಪೆವಿಲಿಯನ್ ಇರಲಿವೆ ಎಂದು ಅವರು ವಿವರಿಸಿದರು.
ಸಮಾವೇಶವು ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ (IDA), ಕೇಂದ್ರ ಶಿಕ್ಷಣ ಇಲಾಖೆ, ನೀತಿ ಆಯೋಗ, ಕೇಂದ್ರ ಕೌಶಲ್ಯ ಮತ್ತು ಉದ್ಯಮಶೀಲತೆ ಇಲಾಖೆ ಮತ್ತು ಎಜುಕೇಶನ್ ವರ್ಲ್ಡ್ ಫೋರಂ ಸಹಯೋಗದಲ್ಲಿ ಜರುಗಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಹಾಗೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಈ ಸಮಾವೇಶದ ಸಹಭಾಗಿತ್ವ ವಹಿಸಿವೆ ಎಂದು ಅವರು ಮಾಹಿತಿ ನೀಡಿದರು.
“ಕರ್ನಾಟಕವು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ವಿಶ್ವದ ನಾವೀನ್ಯತೆಯ ರಾಜಧಾನಿಗಳಲ್ಲಿ ಒಂದಾಗಿದೆ. ವಿವಿಧ ದೇಶಗಳ ಶಿಕ್ಷಣ ಸಚಿವರು, ನಿಯೋಗಗಳು ಮತ್ತು ಶಿಕ್ಷಣ ತಜ್ಞರಿಗೆ ಈ ಸಮಾವೇಶವು ಅತ್ಯಂತ ಆಸಕ್ತಿದಾಯಕವಾಗಿರಲಿದೆಎಂದು ಅಶ್ವತ್ಥ ನಾರಾಯಣ ಅಭಿಪ್ರಾಯ ಪಟ್ಟರು.
ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ ಸಿಇಒ ಆದಿತ್ಯ ಗುಪ್ತಾ ಮಾತನಾಡಿ, ಈ ಸಮಾವೇಶವು ಶಿಕ್ಷಣ ಕ್ಷೇತ್ರದ ಆವಿಷ್ಕಾರಗಳನ್ನು ಒಂದೇ ಸೂರಿನಡಿ ತರಲಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರ ಎದುರಿಸಿದ ಅನೇಕ ಸವಾಲುಗಳಿಗೆ ಪರಿಹಾರಗಳನ್ನು ಪ್ರಸ್ತುತ ಪಡಿಸಲಿದೆ ಎಂದರು.
ಏಷಿಯನ್ ಸಮ್ಮಿಟ್ ಆನ್ ಎಜುಕೇಶನ್ ಅಂಡ್ ಸ್ಕಿಲ್ಸ್ (ASES) ಸಮಾವೇಶ
ಏಷಿಯನ್ ಸಮ್ಮಿಟ್ ಆನ್ ಎಜುಕೇಶನ್ ಅಂಡ್ ಸ್ಕಿಲ್ಸ್ ಸಮಾವೇಶದ 7ನೇ ಆವೃತ್ತಿಯೂ ಸೆ. 20 ಮತ್ತು 21ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಇದರಲ್ಲಿ ಯುಕೆ, ಬ್ರೆಜಿಲ್, ಮಲೇಶಿಯಾ, ಸೌದಿ ಅರೇಬಿಯಾ ಸೇರಿದಂತೆ 15 ದೇಶಗಳ ಶಿಕ್ಷಣ ಸಚಿವರು, ಸಚಿವರ ನಿಯೋಗಗಳು ಪಾಲ್ಗೊಳ್ಳಲಿವೆ. ಭಾರತದ 10 ರಾಜ್ಯಗಳ ಶಿಕ್ಷಣ ಸಚಿವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ನುಡಿದರು. ಎಜುಕೇಶನ್ ವರ್ಲ್ಡ್ ಫೋರಂನ ನಿರ್ದೇಶಕ ಡೊಮಿನಿಕ್ ಸವಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕಾರ್ಯಾಗಾರಗಳು/ಸಮ್ಮೇಳನಗಳು
ಡೈಡ್ಯಾಕ್ಟ್ ಇಂಡಿಯಾ ಸಮಾವೇಶದ ಜೊತೆ ಹಲವು ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳು ಸಹ ಜರುಗಲಿವೆ. ಇಂಟರ್ ನ್ಯಾಷನಲ್ ಎಜುಕೇಶನ್ ಅಂಡ್ ಸ್ಕಿಲ್ ಸಮ್ಮಿಟ್, ಡೈಡ್ಯಾಕ್ ಅಲೈಯನ್ಸ್ ಆಫ್ ಇಂಟರ್ ನ್ಯಾಷನಲ್ ಸ್ಕೂಲ್ಸ್ ಕಾನ್ಫರೆನ್ಸ್, ಅರ್ಲಿ ಲರ್ನಿಂಗ್ ಕಾನ್ಫರೆನ್ಸ್, ಕೆ-12 ಎಜುಕೇಶನ್ ಕಾನ್ಫರೆನ್ಸ್, ಐಡಿಎ ಕನೆಕ್ಟ್ ವರ್ಕ್ ಶಾಪ್ ಮುಂತಾದ ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳು ಸಮಾವೇಶದ ಭಾಗವಾಗಿರಲಿವೆ.
BIGG NEWS : ಯಾವ ಒತ್ತಡಕ್ಕೂ ಮಣಿಯದೇ ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ : ಸಚಿವ ಆರ್. ಅಶೋಕ್ ಸ್ಪಷ್ಟನೆ