ಅಯೋಧ್ಯೆ : ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಆದ ಬಳಿಕ ದರ್ಶನಕ್ಕಾಗಿ ಭಕ್ತರ ದಂಡೆ ಹರಿದು ಬಂದಿದೆ. 11 ದಿನಗಳಲ್ಲಿ ಭಕ್ತರು ನೀಡಿದ ದೇಣಿಗೆ 11.5 ಕೋಟಿ ರೂ. ದಾಟಿದೆ. ಸುಮಾರು 8 ಕೋಟಿ ರೂಪಾಯಿ ಕಾಣಿಕೆ ಪೆಟ್ಟಿಗೆಗಳಲ್ಲಿ ಜಮಾ ಮಾಡಲಾಗಿದೆ ಮತ್ತು ಸುಮಾರು 3.50 ಕೋಟಿ ರೂಪಾಯಿಯನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ದೇಗುಲದ ಗರ್ಭಗುಡಿಯ ಮುಂಭಾಗದ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಗಾತ್ರದ ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗಿದ್ದು, ಅದರಲ್ಲಿ ಭಕ್ತರು ಕಾಣಿಕೆ ಹಾಕುತ್ತಾರೆ. 11 ಬ್ಯಾಂಕ್ ಉದ್ಯೋಗಿಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಮೂವರನ್ನು ಒಳಗೊಂಡ 14 ಜನರ ತಂಡವು ನಾಲ್ಕು ಪೆಟ್ಟಿಗೆಗಳಲ್ಲಿನ ಕಾಣಿಕೆಗಳನ್ನು ಎಣಿಸುತ್ತದೆ.
ದೇಣಿಗೆ ಮೊತ್ತವನ್ನು ಠೇವಣಿ ಇಡುವುದರಿಂದ ಹಿಡಿದು ಎಣಿಸುವವರೆಗೆ ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲಿನಲ್ಲಿ ಮಾಡಲಾಗುತ್ತದೆ ಎಂದು ದೇವಾಲಯದ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಹೇಳಿದ್ದಾರೆ.ಇನ್ನು ಉತ್ತರಪ್ರದೇಶದಲ್ಲಿನ ಹವಾಮಾನ ಬದಲಾವಣೆ ಯಿಂದಾಗಿ ಭಕ್ತರಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ದೇವಾಲಯದಲ್ಲಿ ಸುಮಾರು ಐದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಬಿಜೋಲಿಯಾ ಕಲ್ಲುಗಳನ್ನು ಅಳವಡಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.