ಚಿಕ್ಕಬಳ್ಳಾಪುರ : ಇತ್ತೀಚೆಗೆ ದೇವೇಗೌಡ್ರು ಮೋದಿ ಅವರನ್ನು ಹೊಗಳುತ್ತಿದ್ದಾರೆ. ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಹೇಳಿದ್ರು, ಮೋದಿ ಪ್ರಧಾನಿ ಆದ್ರೆ ದೇಶ ಬಿಟ್ಟು ಹೋಗ್ತೀನಿ ಎಂದಿದ್ದರು. ಆದರೆ, ಈಗ ಮೋದಿ ನನಗೆ ಅವಿನಾಭಾವ ಸಂಬಂಧ ಎಂದು ಹೇಳಿ ಕೊಳ್ಳುತ್ತಿದ್ದಾರೆ.ಈಗ ಕುಮಾರಸ್ವಾಮಿ ದೇವೇಗೌಡ್ರು ಬಿಜೆಪಿ ವಕ್ತಾರಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚಿಂತಾಮಣಿ ನಗರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಇಷ್ಟೆಲ್ಲಾ ಸುಳ್ಳು ಹೇಳಿ ಮೋದಿಯನ್ನು ಹೊಗಳುತ್ತಿದ್ದಾರೆ. ಇದು ನ್ಯಾಯನಾ ಎಂದು ಪ್ರಶ್ನಿಸಿದರು. ಈಗ ಕುಮಾರಸ್ವಾಮಿ ದೇವೇಗೌಡ್ರು ಬಿಜೆಪಿ ವಕ್ತಾರಾಗುತ್ತಿದ್ದಾರೆ. ಇವರು ಕರ್ನಾಟಕ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ. ಬಿಜೆಪಿ ಜೊತೆ ಸೇರಿ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಘೋಷಣೆಗಳನ್ನು ಜಾರಿ ಮಾಡಿದರೆ ಕರ್ನಾಟಕ ಖಜಾನೆ ಖಾಲಿಯಾಗುತ್ತೆ ಎಂದು ಪ್ರತಿಪಕ್ಷದ ಬಿಜೆಪಿಯವರು ಅಪ ಪ್ರಚಾರ ಮಾಡಿದರು. ಗ್ಯಾರಂಟಿಗಳನ್ನು ಲೋಕಸಭೆ ಚುನಾವಣೆ ನಂತರ ಮೇಲೆ ನಿಲ್ಲಿಸುತ್ತಾರೆ ಎಂದ ಹೇಳಿಕೊಳ್ಳುತ್ತಿದ್ದಾರೆ. ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವುದು ಬದಲು ಅವರೇ ಮೂರ್ಖರಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಮಾಜಿ ಮಂತ್ರಿಯೊಬ್ಬರು ಹೇಳುತ್ತಿದ್ದಾರೆ. ಬಡವರು, ಅಲ್ಪಸಂಖ್ಯಾತರು, ಕಾರ್ಮಿಕರು ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಆದರೆ ಬಿಜೆಪಿಯವರು ಸಂವಿಧಾನ ವಿರೋಧಿಗಳು ಅದಕ್ಕೋಸ್ಕರ ಬಿಜೆಪಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಇದ್ರೆ ಬಿಜೆಪಿಯವರಿಗೆ ನಿದ್ದೆ ಬರಲ್ಲ. ಈಗಲೂ ಸರ್ಕಾರವನ್ನು ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ. ಈ ಭಾಗದ ಎಂ ಪಿ ಮುನಿಸ್ವಾಮಿ ಒಂದು ಸಲವಾದರೂ ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರಾ? ಮುನಿಸ್ವಾಮಿ ಯಾವ ಕಾರಣಕ್ಕೂ ಗೆಲ್ಲಬಾರದು. ದ್ರೋಹಿಗಳಿಗೆ ಪಾಠ ಕಲಿಸಬೇಕಾದರೆ ಮುಂದಿನ ಲೋಕಸಭೆಯಲ್ಲಿ ಸೋಲಿಸಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಡಬೇಕು ಎಂದು ತಿಳಿಸಿದರು.