ಬೆಳಗಾವಿ : ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ (56) ಮಣ್ಣಲ್ಲಿ ಮಣ್ಣಾಗಿದ್ದಾರೆ.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ನಿಧನರಾದ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ (56) ಅಂತ್ಯಸಂಸ್ಕಾರವನ್ನು ಚಂದ್ರಮಾ ಫಾರ್ಮ್ ಹೌಸ್ ನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ಯಂಡ್ರಾವಿ ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಕುಶಾಲ ತೋಪು ಸಿಡಿಸಿ ಸಕಲ ಮರ್ಯಾದೆಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಸ್ಥಳದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ವಿವಿಧ ಸಚಿವರು, ಶಾಸಕರು ಉಪಸ್ಥಿತರಿದ್ದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕ ಆನಂದ ಮಾಮನಿ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ನಿಧನರಾಗಿದ್ದಾರೆ. .ಮಾಮನಿ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ನಡೆಸಿತ್ತು. ಆನಂದ ಮಾಮನಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆನಂದ್ (ವಿಶ್ವನಾಥ್) ಚಂದ್ರಶೇಖರ್ ಮಾಮನಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನವರಿ 18, 1966 ಜನಿಸಿದರು. ತಂದೆ ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ, ತಾಯಿ ಶ್ರೀಮತಿ ಗಂಗಮ್ಮ ಮಾಮನಿ. ಹಿಂದೂ ಲಿಂಗಾಯತ (ಪಂಚಮಸಾಲಿ) ಸಮುದಾಯಕ್ಕೆ ಸೇರಿದ ಇವರು ಸವದತ್ತಿಯ ಗೌರವಕುಟುಂಬಕ್ಕೆ ಸೇರಿದವರು.2008 ರಲ್ಲಿ ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಸವದತ್ತಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅವರು ಮತ್ತೆ 2013-2018 ರಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿದರು. ಮತ್ತೆ 2018 ರಲ್ಲಿ ಮೂರನೇ ಬಾರಿಗೆ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
‘ಭಾರತ್ ಜೋಡೋ ಯಾತ್ರೆ’ ಇದೀಗ ‘ಕಾಂಗ್ರೆಸ್ ತೊಡೋ ಯಾತ್ರೆ’ : ಪ್ರಲ್ಹಾದ್ ಜೋಶಿ ವ್ಯಂಗ್ಯ
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಪ್ರಯತ್ನಗಳಿಗೆ ಶ್ರೀರಾಮನೇ ಸ್ಫೂರ್ತಿ ; ಪ್ರಧಾನಿ ಮೋದಿ