ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಾದ್ಯಂತ ಗುರುವಾರ ಬೆಳಗ್ಗೆ ದಟ್ಟ ಮಂಜು ಕಂಡು ಬಂದಿದ್ದು, ಎಲ್ಲೆಡೆ ಚಳಿ ಪ್ರಮಾಣ ಹೆಚ್ಚಾಗಿದೆ. ಇದು ಶುಕ್ರವಾರವು ಮುಂದುವರಿಯುವ ಮುನ್ಸೂಚನೆ ಇದೆ.
ಬೆಂಗಳೂರು ಹವಾಮಾನ ಬದಲಾವಣೆ ವರದಿ ಪ್ರಕಾರ, ಇಂದಿನಿಂದ (ಗುರುವಾರ) ಎರಡು ದಿನ ಬೆಳಗ್ಗೆ ದಟ್ಟವಾದ ಮಂಜು ಕವಿದ ಪರಿಸರ ಹಾಗೂ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಮುಖ್ಯವಾಗಿ ಶುಕ್ರವಾರ ಒಂದು ದಿನ ಚಳಿ ಪ್ರಮಾಣದಲ್ಲಿ ಇನ್ನಷ್ಟು ಏರಿಕೆ ಆಗಲಿದೆ. ಗುರುವಾರ ಬೆಳಗ್ಗೆ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಶುಕ್ರವಾರ ಮತ್ತಷ್ಟು ಕಡಿಮೆ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ಶನಿವಾರ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಬಿಡದಿ, ಬೊಮ್ಮನಹಳ್ಳಿ ಸೇರಿದಂತೆ ಇಡಿ ಬೆಂಗಳೂರಿನಾದ್ಯಂತ ದಟ್ಟ ಮಂಜು ಆವರಿಸಿದೆ. ಎದುರಿನ ವ್ಯಕ್ತಿಗಳು, ವಾಹನ, ಕಟ್ಟಡಗಳು ಕಾಣದಷ್ಟು ಮಂಜು ಕವಿದಿದೆ. ಬೆಳಗ್ಗೆ ಮನೆಯಿಂದ ಹೋರಹೋಗದಷ್ಟು ಚಳಿ ಕಾಡುತ್ತಿದೆ. ಕೆಲವರು ಚಳಿಯಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ಇದ್ದರೆ ಇನ್ನೂ ಕೆಲವರು ಬೆಚ್ಚಗಿನ ದಿರಿಸು, ಶಾಲು ಹೊದ್ದು ಕೆಲಸ ಕಾರ್ಯಗಳಿಗೆ ತೆರಳಿದ್ದು ಸಾಮಾನ್ಯ ಎಂಬಂತಿತ್ತು
ಈ ಕುರಿತು ಟ್ವೀಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಫೋಟೊ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಗುರುವಾರ (ನ.17) ಬೆಂಗಳೂರು ದಟ್ಟ ಚಳಿಗಾಲದ ಮಂಜಿನ ಮಧ್ಯೆ ಉದಯಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ರಾಜ್ಯದ
ಸದ್ಯ ರಾಜ್ಯದಲ್ಲಿ ಹಿಂಗಾರು ಮಳೆ ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ ಹಿಂಗಾರು ಮಳೆಯ ಕಾಲದಲ್ಲಿ ಕಡಿಮೆ ಚಳಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮಬ್ಬು ವಾತಾವರಣ ಇರುತ್ತದೆ. ಬಳಿಕ ಡಿಸೆಂಬರ್ ಮಧ್ಯಭಾಗದಿಂದ ಸುಮಾರು ಎರಡು ತಿಂಗಳು ಅತ್ಯಧಿಕ ಬಳಿ, ಮಂಜು ಕಂಡು ಬರಲಿದೆ. ಆದರೆ ಈ ಭಾರಿ ಬದಲಾದ ವಾತಾವಣ, ಅಕಾಲಿಕ ವೈಪರಿತ್ಯಗಳಿಂದಾಗಿ ಮಳೆ ಬಂದು ಹೋದ ಕೆಲವು ದಿನಗಳಲ್ಲೇ ಚಳಿ ಆವರಿಸುತ್ತಿದೆ.
ಮತ್ತೆ ವೈಪರಿತ್ಯದ ಮುನ್ಸೂಚನೆ ಇದೆ ಕಳೆದ ಒಂದು ವಾರದಲ್ಲಿ ಎರಡು ವಾಯುಭಾರ ಕುಸಿತ ಸಂಭವಿಸಿತ್ತು. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ತಮಿಳುನಾಡು ಪುದುಚೇರಿ ಮಾರ್ಗವಾಗಿ ಸಾಗಿ ಅರಬ್ಬಿ ಸಮುದ್ರದಲ್ಲಿ ಕೊನೆಗೊಂಡಿತ್ತು. ಜೊತೆಗೆ ನೈಋತ್ಯ ಬಂಗಾಳಕೊಲ್ಲಿ ಸಹ ಸ್ಟ್ರಫ್ (ತೀವ್ರ ಗಾಳಿ) ಬೀಸಿತ್ತು. ಇದರ ಬೆನ್ನಲ್ಲೆ ಕಳೆದ ವಾರ ಮೂರರಿಂದ ನಾಲ್ಕು ದಿನ ನಗರದಲ್ಲಿ ಜಿಟಿ ಜಿಟಿ ಮಳೆ ಆಗಿತ್ತು. ಮಳೆಯಾದ ಕೆಲವೇ ದಿನಗಳಲ್ಲಿ ಇದೀಗ ಮಂಜು, ಚಳಿ ಕಂಡು ಬಂದಿದೆ.
ಮುಂದಿನ 48ಗಂಟೆ ನಂತರ ವಾತಾವರಣದಲ್ಲಿ ಮತ್ತೆ ಬದಲಾವಣೆ ಆಗುವ ಸಾಧ್ಯತೆ ಇದೆ. ಆಗ ಮತ್ತೆ ಮಳೆ ಸುರಿದರೆ ಪುನಃ ಮಳೆ ಇಳಿಕೆ ಬೆನ್ನಲ್ಲೆ ಇದೇ ರೀತಿ ಚಳಿ, ಮಂಜು ಆವರಿಸುವ ನಿರೀಕ್ಷೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.