ಬೆಂಗಳೂರು : ಚಿನ್ನಯ್ಯ ತಂದುಕೊಟ್ಟ ಬುರುಡೆ ಎಲ್ಲಿಯದ್ದು ಅನ್ನೋ ಯಕ್ಷ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮುಸುಕುಧಾರಿಯನ್ನ 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ SIT ಸ್ಫೋಟಕ ರಹಸ್ಯಗಳನ್ನ ಬಯಲಿಗೆಳೆಯುತ್ತಿದೆ.
ಚಿನ್ನಯ್ಯ ತಂದಿದ್ದ ʻಬುರುಡೆʼ ಅಧಿಕಾರಿಗಳು ಧರ್ಮಸ್ಥಳ ನೋಡುವುದಕ್ಕೂ ಮುನ್ನವೇ ದೆಹಲಿ ನೋಡಿತ್ತು ಅನ್ನೋದು ಗೊತ್ತಾಗಿದೆ. ಹೌದು. ಷಡ್ಯಂತ್ರದ ಗ್ಯಾಂಗ್ ಚಿನ್ನಯ್ಯನ ಸಮೇತ ಬುರುಡೆಯನ್ನ ದೆಹಲಿಗೆ ತೆಗೆದುಕೊಂಡು ಹೋಗಿತ್ತು. ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನ ಭೇಟಿಯಾಗಿ ಬುರುಡೆಯನ್ನ ತೋರಿಸಲಾಗಿತ್ತು. ಬುರುಡೆ ಸಮೇತ ಇಡೀ ಪ್ರಕರಣದ ಕಥೆಯನ್ನು ಅಲ್ಲಿ ಹೇಳಲಾಗಿತ್ತು. ಮೆಗಾ ಡೀಲ್ ಕೂಡ ನಡೆದಿತ್ತು ಅನ್ನೋ ರಹಸ್ಯ ಬೆಳಕಿಗೆ ಬಂದಿದೆ.
ಈ ಮಧ್ಯೆ ಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದೇ ಅಲ್ಲ ಎನ್ನುವುದು ವಿಧಿವಿಜ್ಞಾನ ಪ್ರಾಯೋಗಾಲಯದಲ್ಲಿ ದೃಢಪಟ್ಟಿತ್ತು. ಇದು ಪಕ್ಕಾ ಆಗುತ್ತಿದ್ದಂತೆ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಬೇರೆ ಜಾಗದಿಂದ ಈ ಬುರುಡೆ ತಂದಿದ್ದೇನೆ. ಬೇರೆಯವರು ಹೇಳಿದಂತೆ ನಾನು ಈ ಪ್ರಕರಣಕ್ಕೆ ಬಂದಿದ್ದೇನೆ ಎಂದು ಬಾಯಿಬಿಟ್ಟಿದ್ದ.