ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಗಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರನ್ನು ಈಗ ರದ್ದುಪಡಿಸಲಾದ 2021-22 ದೆಹಲಿ ಅಬಕಾರಿ ನೀತಿಯನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ದೆಹಲಿ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಇದು ರಾಜಧಾನಿಯ ರಾಜಕೀಯದ ಮೇಲೆ ದೀರ್ಘ ಕರಿನೆರಳು ಬೀರಿದ ಮತ್ತು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಿದ ಹೈಪ್ರೊಫೈಲ್ ಪ್ರಕರಣದಲ್ಲಿ ನಾಟಕೀಯ ತಿರುವು ನೀಡಿದೆ.
ನ್ಯಾಯಾಲಯದ ಮಹತ್ವದ ತೀರ್ಪು ಮತ್ತು ಅವಲೋಕನಗಳು
ವಿಶೇಷ ನ್ಯಾಯಾಧೀಶರಾದ ಜಿತೇಂದ್ರ ಸಿಂಗ್ ಅವರು ತೆಲಂಗಾಣದ ಮಾಜಿ ಶಾಸಕಿ ಕೆ. ಕವಿತಾ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಿಡುಗಡೆಗೊಳಿಸಿದರು (Discharged). ಸಿಬಿಐ ಮಂಡಿಸಿರುವ ದಾಖಲೆಗಳು ಮೇಲ್ನೋಟಕ್ಕೆ ಯಾವುದೇ ಪ್ರಕರಣವನ್ನು ಪುಷ್ಟೀಕರಿಸುತ್ತಿಲ್ಲ, ಹೋಗಲಿ ಕನಿಷ್ಠ ಗಂಭೀರ ಸಂದೇಹವನ್ನೂ ಹುಟ್ಟುಹಾಕುತ್ತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಂಗ ತಪಾಸಣೆಯಲ್ಲಿ ಸೋತ ಸಿಬಿಐ: ಅಬಕಾರಿ ನೀತಿ ಪ್ರಕರಣವು ನ್ಯಾಯಾಂಗದ ಪರಿಶೀಲನೆಗೆ ಅರ್ಹವಾಗಿಲ್ಲ ಮತ್ತು ಇದು ಸಂಪೂರ್ಣವಾಗಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಕೋರ್ಟ್ ಹೇಳಿದೆ. ಈ ಕಲ್ಪಿತ ಪಿತೂರಿಯು ಕೇವಲ ಊಹೆ ಮತ್ತು ಅನುಮಾನಗಳ ಮೇಲೆ ನಿಂತಿದೆಯೇ ಹೊರತು, ಇದಕ್ಕೆ ಯಾವುದೇ ಕಾನೂನಾತ್ಮಕ ಪುರಾವೆಗಳಿಲ್ಲ ಎಂದು ಕಿಡಿಕಾರಿದೆ.
ತನಿಖೆಯ ಲೋಪದೋಷ: ಸಿಬಿಐ ಸಂಗ್ರಹಿಸಿದ ದಾಖಲೆಗಳೇ ಅವರ ತನಿಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಸಾಕ್ಷ್ಯಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದೆ. ಹೀಗಾಗಿ ಈ ಪ್ರಕರಣ ಕಾನೂನುಬದ್ಧವಾಗಿ ಅಸ್ಥಿರವಾಗಿದ್ದು, ವಿಚಾರಣೆಯನ್ನು ಮುಂದುವರಿಸಲು ಯೋಗ್ಯವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಪ್ರತಿಕ್ರಿಯೆ
ತೀರ್ಪನ್ನು ಸ್ವಾಗತಿಸಿದ ಕೇಜ್ರಿವಾಲ್ ಕ್ಯಾಮೆರಾಗಳ ಮುಂದೆ ಭಾವುಕರಾದರು. “ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಈ ಪಿತೂರಿ ಮಾಡಿದ್ದರು. ನಾನು ಕೇವಲ ಪ್ರಾಮಾಣಿಕತೆಯನ್ನು ಸಂಪಾದಿಸಿದ್ದೇನೆ, ಹಣವನ್ನಲ್ಲ. ಕೇಜ್ರಿವಾಲ್ ಮತ್ತು ಆಪ್ ‘ಕಟ್ಟರ್ ಪ್ರಮಾಣಿಕರು’ ಎಂಬುದು ಇಂದು ಸಾಬೀತಾಗಿದೆ. ಇದಕ್ಕಾಗಿ ಅವರು ದೇಶದ ಕ್ಷಮೆ ಕೇಳಬೇಕು” ಎಂದರು.
ಸಿಬಿಐ ಮತ್ತು ಬಿಜೆಪಿ ನಿಲುವು
ಸಿಬಿಐ ಮೇಲ್ಮನವಿ: ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ ಸಿಬಿಐ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. “ತನಿಖೆಯ ಹಲವು ಆಯಾಮಗಳನ್ನು ವಿಚಾರಣಾ ನ್ಯಾಯಾಲಯವು ನಿರ್ಲಕ್ಷಿಸಿದೆ” ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಬಿಜೆಪಿ ಟೀಕೆ: ಇದು ಕೇವಲ ತಾಂತ್ರಿಕ ತೀರ್ಪು ಎಂದು ಬಿಜೆಪಿ ಬಣ್ಣಿಸಿದೆ. “ತನಿಖೆ ಆರಂಭವಾಗುತ್ತಿದ್ದಂತೆಯೇ ಅಬಕಾರಿ ನೀತಿಯನ್ನು ಹಿಂಪಡೆದಿದ್ದೇಕೆ? ನೀವು ಸರಿಯಾಗಿದ್ದರೆ ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನಿಸಿದ್ದು ಏಕೆ?” ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಪ್ರಶ್ನಿಸಿದ್ದಾರೆ.
ಪ್ರಕರಣದ ಹಿನ್ನೆಲೆ
2021-22ರ ಅಬಕಾರಿ ನೀತಿಯಲ್ಲಿ ಖಾಸಗಿ ಕಂಪನಿಗಳಿಗೆ ಮದ್ಯ ಮಾರಾಟದ ಪರವಾನಗಿ ನೀಡುವಾಗ ಕಿಕ್‌ಬ್ಯಾಕ್ (ಲಂಚ) ಪಡೆಯಲಾಗಿದೆ ಎಂಬುದು ಸಿಬಿಐ ಆರೋಪವಾಗಿತ್ತು. ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 2023 ರಲ್ಲಿ ಮತ್ತು ಕೇಜ್ರಿವಾಲ್ ಅವರನ್ನು ಮಾರ್ಚ್ 2024 ರಲ್ಲಿ ಬಂಧಿಸಲಾಗಿತ್ತು.
ನ್ಯಾಯಾಲಯ ನೀಡಿದ ಇತರ ಪ್ರಮುಖ ಅಂಶಗಳು:
ಕೇಜ್ರಿವಾಲ್ ವಿರುದ್ಧ ಸಾಕ್ಷ್ಯವಿಲ್ಲ: ಕೇಜ್ರಿವಾಲ್ ವಿರುದ್ಧದ ಆರೋಪಗಳು ಕೇವಲ ‘ಕೇಳಿ ಬಂದ ಮಾತುಗಳ’ (Hearsay) ಮೇಲೆ ನಿಂತಿವೆ. ಅವರು ಯಾವುದೇ ಪಿತೂರಿ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಅಥವಾ ಅಕ್ರಮ ಹಣದ ವ್ಯವಹಾರ ನಡೆಸಿದ್ದಕ್ಕೆ ಯಾವುದೇ ಡಿಜಿಟಲ್ ಅಥವಾ ದಾಖಲೆ ಪುರಾವೆಗಳಿಲ್ಲ.
ಸಿಸೋಡಿಯಾ ಪಾತ್ರ: ಸಿಸೋಡಿಯಾ ಅವರು ಅಂದಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಸಲಹೆಗಳನ್ನು ಪಾಲಿಸಿದ್ದಾರೆ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲೇ ಕೆಲಸ ಮಾಡಿದ್ದಾರೆ. ಅವರು ಏಕಪಕ್ಷೀಯವಾಗಿ ಯಾವುದೇ ಬದಲಾವಣೆ ಮಾಡಿಲ್ಲ.
ತನಿಖಾಧಿಕಾರಿಗೆ ತರಾಟೆ: ಯಾವುದೇ ಪುರಾವೆ ಇಲ್ಲದಿದ್ದರೂ ಕುಲದೀಪ್ ಸಿಂಗ್ ಎಂಬ ಅಧಿಕಾರಿಯನ್ನು ಪ್ರಕರಣದಲ್ಲಿ ಸಿಲುಕಿಸಿದ್ದಕ್ಕಾಗಿ, ಸಂಬಂಧಪಟ್ಟ ತನಿಖಾಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಗೆ ನ್ಯಾಯಾಲಯ ಶಿಫಾರಸು ಮಾಡಿದೆ.
’ಸೌತ್ ಗ್ರೂಪ್’ ಪದಬಳಕೆಗೆ ಆಕ್ಷೇಪ: ಸಿಬಿಐ ಬಳಸಿದ “ಸೌತ್ ಗ್ರೂಪ್” ಎಂಬ ಪದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. “ಚೆನ್ನೈ ನ್ಯಾಯಾಲಯದಲ್ಲಿ ಇಂತಹ ಪದ ಬಳಸಿದ್ದರೆ ಅವರು ಆಕ್ಷೇಪಿಸುತ್ತಿರಲಿಲ್ಲವೇ? ಆರೋಪಿಗಳಲ್ಲಿ ಉತ್ತರದವರೂ ಇದ್ದಾರೆ, ಅವರನ್ನು ನೀವು ‘ನಾರ್ತ್ ಗ್ರೂಪ್’ ಎಂದು ಕರೆಯುತ್ತೀರಾ?” ಎಂದು ನ್ಯಾಯಾಧೀಶರು ಪ್ರಶ್ನಿಸಿದರು.








