ಬೆಂಗಳೂರು: ಸ್ವಿಟ್ಸರ್ಲೆಂಡ್‌ನ ದಾವೋಸ್‌ನಲ್ಲಿ ಜನವರಿ 15ರಿಂದ 19ರವರೆಗೆ ನಡೆಯುವ “ವಿಶ್ವ ಆರ್ಥಿಕ ವೇದಿಕೆ-2024” ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗ ಭಾನುವಾರ (ಜ.14) ಪ್ರಯಾಣ ಬೆಳೆಸಲಿದೆ.
“ನಾವೀನ್ಯತೆ ಭವಿಷ್ಯ ರೂಪಿಸುತ್ತದೆ” (ಇನ್ನೋವೇಷನ್ ವಿಲ್ ಇಂಪ್ಯಾಕ್ಟ್) ಎಂಬ ಧ್ಯೇಯವಾಕ್ಯದೊಂದಿಗೆ ತೆರಳುತ್ತಿರುವ ಈ ನಿಯೋಗದಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಐಟಿಬಿಟಿ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ ಡಾ. ಮಹೇಶ್ ಮತ್ತಿತರರು ಇದ್ದಾರೆ.
ಈ ಶೃಂಗಸಭೆಯ ವೇಳೆ ಕರ್ನಾಟಕ ಸರ್ಕಾರದ ಉದ್ಯಮಸ್ನೇಹಿ ನೀತಿಗಳು, ಇಲ್ಲಿನ ಉತ್ತಮ ಕಾರ್ಯಪರಿಸರ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳು, ಮಾನವ ಸಂಪನ್ಮೂಲ ಲಭ್ಯತೆ, ಕೌಶಲ್ಯ ಕಲಿಸಲು ನೀಡುತ್ತಿರುವ ಆದ್ಯತೆ, ಸಿಂಗಲ್ ವಿಂಡೋ ವ್ಯವಸ್ಥೆ ಸೇರಿದಂತೆ ಇಲ್ಲಿನ ಇನ್ನಿತರ ಅನುಕೂಲಗಳ ಬಗ್ಗೆ ಪ್ರಪಂಚದ ಬೇರೆ ಬೇರೆ ಭಾಗದ ಉದ್ಯಮಿಗಳ ಗಮನ ಸೆಳೆಯಲಾಗುವುದು ಎಂದು ನಿಯೋಗದ ಮುಖ್ಯಸ್ಥರಾದ ಎಂ ಬಿ ಪಾಟೀಲ ಅವರು ಶನಿವಾರ ತಿಳಿಸಿದ್ದಾರೆ.
ರಾಜ್ಯವನ್ನು ಏಷ್ಯಾದ ಪ್ರಮುಖ ತಯಾರಿಕಾ ವಲಯವನ್ನಾಗಿ ಬೆಳೆಸುವ ಗುರಿ ಸರ್ಕಾರದ್ದಾಗಿದೆ. ಇದರ ಜೊತೆಗೆ, ಸೆಮಿಕಂಡಕ್ಟರ್, ವಿದ್ಯುತ್ ವಾಹನೋದ್ಯಮ, ಬಾಹ್ಯಾಕಾಶ & ರಕ್ಷಣೆ, ಸ್ವಚ್ಛ ಇಂಧನ, ಸಂಶೋಧನೆ ಮತ್ತು ಅಭಿವೃದ್ಧಿ ,ಕೃತಕ ಬುದ್ಧಿಮತ್ತೆ ಮತ್ತಿತರ ಆಧುನಿಕ ತಂತ್ರಜ್ಞಾನಗಳು ಇವುಗಳಿಗೆ ನಾವು ಒತ್ತು ಕೊಟ್ಟಿದ್ದೇವೆ. ಇದನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಹೂಡಿಕೆ ಸೆಳೆಯುವುದು ಹಾಗೂ ಇದಕ್ಕೆ ಪೂರಕವಾಗಿ ಸಹಭಾಗಿತ್ವಗಳನ್ನು ಸಾಧಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದರು.
‘ಆಸಿಡ್ ಸಂತ್ರಸ್ತ ಮಹಿಳೆ’ಯರ ಗಮನಕ್ಕೆ: ‘2.5 ಲಕ್ಷ’ದವರೆಗೆ ಸಹಾಯಧನ, ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
BREAKING: ‘KSRTC’ ದರ್ಜೆ-03 ‘ತಾಂತ್ರಿಕ ಸಹಾಯಕ ಹುದ್ದೆ’ಯ ‘ಅಂತಿಮ ಆಯ್ಕೆ ಪಟ್ಟಿ’ ಪ್ರಕಟ