ಬೆಂಗಳೂರು : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಸಮಾಧಿಯನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ “ರಾಷ್ಟ್ರೀಯ ಮಹತ್ವದ ಸ್ಮಾರಕ” ಎಂದು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ನೀಡಿರುವ ಅವರು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ, ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮನವಿ.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವೀರ ರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ ತಾಣ ಇರುವುದನ್ನು ಸಮಸ್ತ ಕನ್ನಡಿಗರ ಪರವಾಗಿ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವನ್ನು ಮುನ್ನಡೆಸಿದ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಮೊದಲಿಗರು. ಅವರ ಶೌರ್ಯ ಮತ್ತು ಅದಮ್ಯ ಚೈತನ್ಯ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ.
ಈ ಅಪ್ರತಿಮ ನಾಯಕಿಯ ಸಮಾಧಿಯು ಕೇವಲ ವಿಶ್ರಾಂತಿ ಸ್ಥಳವಲ್ಲ, ಬದಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿನಿಧಿಸುವ ಮಹಾನ್ ಶಕ್ತಿ ಸ್ಥಳವಾಗಿದೆ. 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ರಾಣಿ ಚೆನ್ನಮ್ಮ ಕೆಚ್ಚೆದೆಯಿಂದ ಹೋರಾಡಿದ ಕಾರಣ ಇಂದಿಗೂ ಈ ಸಮಾಧಿ ತಾಣವು ಧೈರ್ಯ ಮತ್ತು ತ್ಯಾಗದ ಸಂಕೇತವಾಗಿ ನಿಂತಿದೆ.
ಹೀಗಾಗಿ, ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮನವಿ ಮಾಡುತ್ತೇನೆ. ಈ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿನ ಅವರ ಹೋರಾಟವನ್ನು ಸ್ಮರಿಸಿ, ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ರಾಣಿ ಚೆನ್ನಮ್ಮನ ಸಮಾಧಿ ತಾಣವು ಅಪಾರ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಆದಾಗ್ಯೂ, ಅದಕ್ಕೆ ಸರಿಯಾದ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯವಿದೆ. ಈ ಸಮಾಧಿ ತಾಣವು ರಾಷ್ಟ್ರೀಯ ಸ್ಮಾರಕ ಆಗುವುದರಿಂದ ದೇಶದ ಪ್ರೇಕ್ಷಣಿಯ ಸ್ಥಳವಾಗಿಯೂ ಗುರುತಿಸಿಕೊಳ್ಳುತ್ತದೆ. ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದರೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ಇದಕ್ಕೂ ಮುಖ್ಯವಾಗಿ ರಾಣಿ ಚೆನ್ನಮ್ಮಳ ಧೈರ್ಯ, ಶೌರ್ಯ, ತ್ಯಾಗವನ್ನು ಮುಂದಿನ ಪೀಳಿಗೆಗೂ ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸ್ವಾತಂತ್ರ್ಯ ಹೋರಾಟದ ಮೂಲಕ ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವಲ್ಲಿ ಇದು ಒಂದು ಸ್ಮರಣೀಯ ಹೆಜ್ಜೆಯಾಗಿದೆ. ಅಲ್ಲದೇ ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವಲ್ಲಿ ಭಾರತ ಸರ್ಕಾರದ ಬದ್ಧತೆಯನ್ನು ಇದು ಖಾತ್ರಿಪಡಿಸುತ್ತದೆ.
ಹೀಗಾಗಿ ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವೆಂದು ಮೌಲ್ಯಮಾಪನ ಮಾಡುವ ಮತ್ತು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತಾವು ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕೆಂದು ವಿನಂತಿಸುತ್ತೇನೆ. ಈ ಮೂಲಕ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಕರ್ನಾಟಕವು ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ.
I have written to Hon’ble Prime Minister Shri @narendramodi urging the declaration of Veera Rani Kittur Chennamma’s Samadhi in Belagavi as a monument of national importance.
Her legacy of courage deserves our highest honor and preservation.#RaniChennamma #Karnataka… pic.twitter.com/0mY5ozreqn
— Siddaramaiah (@siddaramaiah) March 29, 2025