ಮಂಗಳೂರು : ಸುರತ್ಕಲ್ನ ಕೃಷ್ಣಾಪರ 4ನೇ ಬ್ಲಾಕ್ ನೈತಂಗಡಿ ಬಳಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ಜಲೀಲ್ ಮೃತದೇಹ ಕಾಟಿಪಳ್ಳದ ಸ್ವಗೃಹಕ್ಕೆ ರವಾನೆಯಾಗಿದ್ದು,ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ನೂರಾರು ಜನರು ಭಾಗಿಯಾಗಿದ್ದಾರೆ
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಅಂಬುಲೆನ್ಸ್ ಮೂಲಕ ಮೃತದೇಹ ಜಲೀಲ್ ಅವರ ಮನೆಗೆ ಕರೆತರಲಾಯಿತು. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಅಂತಿಮ ವಿಧಿವಿಧಾನದ ಬಳಿಕ ಅಂತ್ಯ ಸಂಸ್ಕಾರವನ್ನು ಕೂಳೂರು ಪಂಜಿಮೊಗರಿನ ಜುಮಾ ಮಸೀದಿ ವಠಾರದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ. ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸಹಿತ ಹಿರಿಯಾ ಪೊಲೀಸ್ ಅಧಿಕಾರಿಗಳು ಭದ್ರತೆ ವಹಿಸಲಿದ್ದಾರೆ.
ಸುರತ್ಕಲ್ ಕಾಟಿಪಳ್ಳದಲ್ಲಿ ವ್ಯಕ್ತಿಯ ಕೊಲೆ ನಡೆದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಾಗಿದೆ. ಡಿ.27ರ ಮುಂಜಾನೆ 6 ಗಂಟೆಯವರೆಗೆ ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಪ್ರಕಟಿಸಿದ್ದಾರೆ.