ಬೆಂಗಳೂರು: ಮೈಸೂರಿನ ಮುಡಾದಿಂದ ಮುಖ್ಯಮಂತ್ರಿಗಳ ಧರ್ಮಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಈಗಿರುವಾಗ ಇದು ಖಂಡಿತವಾಗಿಯೂ ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ ಎಂದು ಕೇಂದ್ರ ಸಚಿವರು ದೂರಿದರು.
ಇದೇ ವೇಳೆ ಕೇಂದ್ರ ಸಚಿವರು ಮಾಧ್ಯಮಗಳ ಮುಂದೆ ಹಗರಣಕ್ಕೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳನ್ನು ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು?
ಸಿಎಂ ಸಿದ್ಧರಾಮಯ್ಯ ಅವರ ಧರ್ಮಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂ ಪರಿವರ್ತನೆ ಆಗಿತ್ತು. ಜಮೀನಿನ ಹಿನ್ನಲೆಯನ್ನು ಯಾರೂ ಪರಿಶೀಲಿಸಲಿಲ್ಲ ಏಕೆ? ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ಅವರು ಪ್ರಶ್ನಿಸಿದರು.
ಈ ಜಮೀನಿನ ಮೂಲದಾರರು ಲಿಂಗ ಆಲಿಯಾಸ್ ಜವರ ಎಂದಿದೆ. ಈ ಜಮೀನನ್ನು 1992ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆಗ 3 ಎಕರೆ 16 ಗುಂಟಗೆ 1992 ರಲ್ಲೇ ಈ ಜಮೀನಿಗೆ ಮುಡಾದಿಂದ ಕೋರ್ಟ್‌ಗೆ ಹಣ ಸಂದಾಯ ಆಗಿದೆ. ಜಮೀನಿನ ಪೋತಿಯೂ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿ ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ಮಾಹಿತಿ ನೀಡಿದರು ಕೇಂದ್ರ ಸಚಿವರು.
1988ರಲ್ಲಿ ಲಿಂಗ ಅಲಿಯಾಸ್ ಜವರ ಹೆಸರಿನಲ್ಲಿ ಡಿ ನೋಟಿಫಿಕೇಷನ್ ಆಗಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುತ್ತಾರೆ. 2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಾರೆ. ಆಗ ಸಿದ್ಧರಾಮಯ್ಯನವರೇ ಉಪ ಮುಖ್ಯಮಂತ್ರಿ ಆಗಿದ್ದರು. ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು. ಜಮೀನಿನ ಹಿನ್ನಲೆ ಪರಿಶೀಲಿಸಲಿಲ್ಲವೆ ಏಕೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
₹62 ಕೋಟಿ ಯಾರಪ್ಪನ ಆಸ್ತಿ?
ಮುಡಾದಿಂದ ತಮಗೆ ₹62 ಕೋಟಿ ಪರಿಹಾರ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು ₹62 ಕೋಟಿ ಕೊಡಬೇಕು. ಇದು ಪಿತಾರ್ಜಿತ ಆಸ್ತಿನಾ? ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ನನ್ನ ಬಳಿ ಎಲ್ಲ ದಾಖಲೆ ಇದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದ ಕುಮಾರಸ್ವಾಮಿ ಅವರು, ಇದು ಹಿಟ್ ಅಂಡ್ ರನ್ ಅಲ್ಲ. ದಾಖಲೆ ಸಮೇತ ಮಾಹಿತಿ ಕೊಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ವಾಲ್ಮೀಕಿ ಹಗರಣ; ಸರ್ಕಾರದಿಂದಲೇ ಚಂದಶೇಖರ್ ಜೀವ ಹರಣ
ವಾಲ್ಮಿಕಿ ನಿಗಮದ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು, ಆಡಳಿತದಲ್ಲಿ ಬಿಗಿ ಇದ್ದಿದ್ದರೆ ಇದು ಆಗುತ್ತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲೇ ₹94 ಕೋಟಿ ವರ್ಗಾವಣೆಯಾಗಿದೆ. ಚಂದ್ರಶೇಖರ್ ಅವರ ಡೆತ್ ನೋಟ್ ಇಲ್ಲದಿದ್ದರೆ ಸಿದ್ಧರಾಮಯ್ಯ ಅವರೇ ಈ ಪ್ರಕರಣ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರ್ಕಾರವೇ ಮಾಡಿದ ಕೊಲೆ. ಯಾವ ರೀತಿ ವರ್ಗಾವಣೆ ದಂಧೆಯ ವ್ಯವಸ್ಥೆ ತಂದಿದ್ದೀರಾ? ನನಗೆ ಅನುಭವ ಆಗಿದೆ. ನಾನು ಇದ್ದ 14 ತಿಂಗಳು ನಾನು ಕೆಲಸ ಮಾಡಲು ಬಳಸಿಕೊಂಡಿಲ್ಲ. ಇಲಾಖೆಗೆ ಸಚಿವರು ಹೇಳಿದ್ದವರನ್ನು ಹಾಕಬೇಕು. ವರ್ಗಾವಣೆ ದಂಧೆ ಬೀದಿಯಲ್ಲಿ ಇಟ್ಟಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ನ್ಯಾ.ನಾಗಮೋಹನ್ ದಾಸ್ ಅವರಿಂದ 40% ತನಿಖೆ ಮಾಡಿಸುತ್ತಿದ್ದೀರಿ. ದಾಖಲೆ ಇಲ್ಲದೆ ಡಂಗೂರ ಹೊಡೆದಿರಿ ಅಲ್ಲವೇ? ಸಾಕ್ಷಿ ಇಲ್ಲದೆ ಈಗ ಹುಡುಕುತ್ತಾ ಇದ್ದೀರಾ? ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದೀರಿ? ನಿಮಗೆ ನನ್ನನ್ನು ಪ್ರಶ್ನೆ ಮಾಡಲು ಆಗಲ್ಲ. ನನ್ನನ್ನು ಕ್ಲರ್ಕ್ ಆಗಿ ಇಟ್ಟುಕೊಂಡಿದ್ದಿರಿ. ಅದಕ್ಕೆ ಕೇಳೋಕೆ ಆಗಲ್ಲ ಎಂದರು ಅವರು.
ಟಿ.ಬಿ. ಜಯಚಂದ್ರ ಅವರಿಗೆ ಕೊಲೆ ಬೆದರಿಕೆ!
ಹಾಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ನೈಸ್ ಹಗರಣ ವರದಿ ಕೊಟ್ಟರು. ಅದನ್ನು ಏನು ಮಾಡಿದೀರಿ? ವರದಿ ಕೊಟ್ಟ ಜಯಚಂದ್ರ ಅವರಿಗೆ ಕೊಲೆ ಬೆದರಿಕೆ ಹಾಕಿದರು ನಿಮ್ಮ ಪಕ್ಷದವರು. ರಾಜ್ಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ನಾನು ಆಂಧ್ರ ಪ್ರದೇಶಕ್ಕೆ ಅಧಿಕೃತ ಪ್ರವಾಸಕ್ಕೆ ಹೋಗಿದ್ದೆ, ಅಲ್ಲೂ ಕೂಡ ಇವರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಕ್ಕೆ ಸಹಿಸಿಕೊಳ್ತಿಲ್ಲವೆಂದು ಸಿಎಂ ಹೇಳುತ್ತಿದ್ದಾರೆ. ಅದಕ್ಕೆ ಅವರ ಪುತ್ರ ತಾಳ ಹಾಕುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಸ್ತಾಪಿಸಿದ ಕೇಂದ್ರ ಸಚಿವರು
ವಾಲ್ಮೀಕಿ ನಿಗಮದ ಹಣ 10 -20 ಬ್ಯಾಂಕ್ ಖಾತೆಗಳಿಗೆ ಐದು, ಮೂರು ಕೋಟಿ ಹಣ ಹೋಗಿದೆ. ಅವೆಲ್ಲಾ ಬೇನಾಮಿ ಅಕೌಂಟ್ಗಳು. ಲೋಕಸಭಾ ಚುನಾವಣೆ ನೀತಿ ಜಾರಿಯಾದ ಸಂದರ್ಭದಲ್ಲಿ ಹೋಗಿದೆ. ಯಾವ ಯಾವ ಅಕೌಂಟ್ ಗೆ ಹಾಕಿಕೊಂಡಿದ್ದಾರೆ. ನಿಗಮದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್ ಬರೆದು ಹೋದರು. ಡೆತ್ ನೋಟ್ ಇಲ್ಲದಿದ್ದರೆ ಏನು ಮಾಡುತಿದ್ದಿರಿ ಸಿದ್ದರಾಮಯ್ಯನವರೇ? ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆಯೋಕೆ ಹೋಗಿದ್ದೀರಾ ನೀವು? ಆ ಸಮಾಜದ ಅಭಿವೃದ್ಧಿಗೆ ಇಟ್ಟ ಹಣವನ್ನು ದರೋಡೆ ಮಾಡಿದ್ದೀರಾ? ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಲ್ಲವೇ? ನಾನು ಒಂದು ಪ್ರಕರಣ ಬಗ್ಗೆ ಲಿಂಕ್ ಮಾಡ್ತೀನಿ. ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಒಂದು ತಿಂಗಳಿಂದ ತೋರಿಸ್ತಾ ಇದ್ದೀರಾ? ಆದರೆ ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳ್ತೀರಾ. ಈ ಪ್ರಕರಣವನ್ನು ಆತ್ಮಹತ್ಯೆ ಅಂತ ಹೇಳ್ತೀರಾ? ಅಥವಾ ಸರ್ಕಾರದಿಂದ ಕೊಲೆ ಅಂತ ಹೇಳ್ತೀರಾ?
ನೀವೆ ಹಿಂದಿನ ಸರ್ಕಾರದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ರಕ್ಷಣೆ ಕೊಟ್ಟಿದ್ದೀರಾ ಮುಖ್ಯಮಂತ್ರಿಗಳೇ? ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆದುಕೊಂಡಿದ್ದೀರಾ? ನಾನು ಆ ಕುರುಬ ಸಮುದಾಯ ಯುವಕನ ಪರ ಧ್ವನಿ ಎತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳಲ್ಲ. ಸರ್ಕಾರದ ನಡೆದ ಹಗರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಲ್ಲಿ ನಿಮ್ಮ ಎಸ್ಐಟಿ ಯಾವ ರೀತಿ ನಡೆದುಕೊಂಡಿದೆ. ಡೆತ್ ನೋಟ್ ನಲ್ಲಿ ಮಂತ್ರಿ ಸೂಚನೆ ಮೇರೆಗೆ ಅಂತ ಬರೆದಿದ್ದಾರೆ. ಯಾರಪ್ಪ ಇಲ್ಲಿ ಡಿಜಿಪಿಗೆ ನೇರವಾಗಿ ದೂರು ನೀಡಬಹುದು. ನೇರವಾಗಿ ದೂರು ಪಡೆದು ನೇರವಾಗಿ ಪೊಲೀಸ್ ಠಾಣೆಗೆ ಡಿಜಿಪಿ ಕಳಿಸ್ತಾರೆ. ಯಾರನ್ನು ಬಂಧಿಸಿಸಿರಿ ಎಂದು ಡಿಜಿಪಿ ವಿರುದ್ಧ ಕಿಡಿಕಾರಿದರು.
ನಿಖಿಲ್ ಮೇಲೆ ಕೇಸ್ ಹಾಕಲು ಡಿಜಿಪಿ ಚರ್ಚೆ; ಪೇದೆ ಮಟ್ಟಕ್ಕೆ ಇಳಿದ ಡಿಜಿಪಿ!!
ಮೊನ್ನೆ ರಾಮನಗರದಲ್ಲಿ ನಡೆದ ಪ್ರತಿಭಟನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ ಮಾಡಿದ್ದಾರೆ. ಹೆಚ್.ಡಿ. ದೇವೆಗೌಡರ ಕುಟುಂಬದಲ್ಲಿ ಎಲ್ಲರನ್ನು ಮುಗಿಸಿದ್ದಿವಿ. ನಿಖಿಲ್ ಒಬ್ಬ ಉಳಿದಿದ್ದಾನೆ. ಅವನನ್ನೂ ಎ1 ಆರೋಪಿ ಮಾಡುಲು ಹೊರಟ್ಟಿದಿರಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರು ಹೇಳಿದ್ರು ಅಂತ ಡಿಜಿಪಿ ಏನು ಮಾಡಲು ಹೊರಟಿದ್ದೀರಿ? ನಮ್ಮ ರಾಜ್ಯದ ಡಿಜಿಪಿ ಒಬ್ಬ ಕಾನ್ಸ್ ಟೇಬಲ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಒಂದುವರೆ ವರ್ಷದಿಂದ ಮಾಡಿರುವ ಕೆಲಸ ಬಿಡಿ. ಇನ್ನು ಮುಂದಾದರೂ ಜನರ ಪರವಾಗಿ ಕೆಲಸ ಮಾಡಿ. ಹಿಂದುಳಿದ ವರ್ಗಗಳು ಮೆಚ್ಚುವ ಕೆಲಸ ಮಾಡಿ. ನಿಮ್ಮ ಆರ್ಥಿಕ ಸಲಹೆಗಾರರು ಏನು ಹೇಳಿದ್ದಾರೆ. ಅಭಿವೃದ್ಧಿಗೆ ಹಣವಿಲ್ಲ ಅಂತ ಹೇಳಿದ್ದಾರೆ. ನಾನು ಆರ್ಥಿಕ ಸಲಹೆಗಾರನಾಗಿದ್ದಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿದ್ದೀನಿ ಎಂದಿದ್ದಾರೆ. ಇನ್ನುಳಿದ ಶಾಸಕರು ಏನು ಮಾಡಬೇಕು. ಇದು ನಾವು ಹೇಳಿಲ್ಲ, ನಿಮ್ಮ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ ಎಂದು ಅವರು ಟೀಕಿಸಿದರು.
ಈಗ ಒಂದು ಇಲಾಖೆ ಮಾತ್ರ ಕಾಣಿಸ್ತಾ ಇದೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದಕ್ಕೆ ಹೊರಗೆ ಬಂದಿದೆ. ಸಿಎಜಿ ವರದಿ ಇಟ್ಟುಕೊಂಡು ಏನು ಮಾಡೋಕೆ ಆಗುತ್ತದೆ. ಈ ರೀತಿಯ ಪ್ರಕರಣದಲ್ಲಿ ಡಿಜಿಪಿಯವರು ಆ ಕಚೇರಿಯನ್ನು ಪೇದೆ ಕಚೇರಿ ಮಾಡಿದ್ದಾರೆ. ಡಿಜಿಪಿ ಕೆಲಸ ಮಾಡ್ತಾ ಇದ್ದೀರಾ ಅಥವಾ ಪೇದೆ ಕೆಲಸ ಮಾಡ್ತಾ ಇದ್ದೀರಾ ಎಂದು ಡಿಜಿಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಡಿಯವರು ಯಾಕೆ ಬಂದಿದ್ದಾರೆ. ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಅವರಿಗೆ ತನಿಖೆ ಮಾಡೋಕೆ ಅಧಿಕಾರ ಇದೆ ಅದಕ್ಕೆ ಬಂದಿದ್ದಾರೆ ಎಂದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಟಿ.ಎ.ಶರವಣ, ಶಾಸಕ ಶರನುಗೌಡ ಕಂದಕೂರ, ಪಕ್ಷದ ಹಿರಿಯ ಮುಖಂಡರಾದ ಪ್ರಕಾಶ್, ರವೀಶ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ಗ್ಯಾರಂಟಿಯಿಂದ ಜನರಿಗೆ ಆರ್ಥಿಕ ಬಲ: MLC ದಿನೇಶ್ ಗೂಳಿಗೌಡ
KPCC ಕಚೇರಿಯ ಸ್ವಚ್ಛತಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಮನೆ ನೀಡಲು ಸಿಎಂ ಸಿದ್ಧರಾಮಯ್ಯ ಸೂಚನೆ