ದಾವಣಗೆರೆ : ನ್ಯಾಕ್ ಪರಿಶೀಲನಾ ಸಮಿತಿಯ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಗಾಯತ್ರಿ ಅವರನ್ನು 6 ತಿಂಗಳ ಅವಧಿಗೆ ಅಮಾನತು ಮಾಡಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ನ್ಯಾಕ್ ತಪಾಸಣಾ ಸಮಿತಿಯ ಸದಸ್ಯರೂ ಆಗಿರುವ ಗಾಯತ್ರಿ ಅವರನ್ನು ಲಂಚ ಪಡೆದ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಇತ್ತೀಚಿಗೆ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದರು.
ಪ್ರಕರಣ ಹಿನ್ನೆಲೆ?
ಕಳೆದ ಫೆಬ್ರವರಿ 3 ರಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಎಲ್‌ಇಎಫ್ ವಿವಿಗೆ ನ್ಯಾಕ್ ಕಮಿಟಿಯಿಂದ ಎ++ ಗ್ರೇಡ್ ನೀಡುವಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ 10 ಜನರನ್ನು ಸಿಬಿಐ ಬಂಧಿಸಿತ್ತು.
ನ್ಯಾಕ್ ತಂಡದ ಅಧ್ಯಕ್ಷರು ಮತ್ತು ಜೆ ಎನ್ ಯು ಪ್ರೊಫೆಸರ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ 10 ಸದಸ್ಯರನ್ನು ಬಂಧಿಸಲಾಗಿದೆ.ಗಾಯತ್ರಿ ದೇವರಾಜ್ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವಾಗ, ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ದೇಶಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತು. ಈ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟಾಪ್‌ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ.