ದಾವಣಗೆರೆ : ಪ್ರೇಯಸಿಯ ಜೊತೆಗೂಡಿ ತನ್ನ ಹೆಂಡತಿಯನ್ನೇ ಕ್ರೂರವಾಗಿ ಕೊಲೆ ಮಾಡಿ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಕೆರೆಯಲ್ಲಿ ಎಸೆದಿದ್ದು, ಇದೀಗ 19 ದಿನಗಳ ನಂತರ ಶವ ಪತ್ತೆಯಾಗಿರುವ ಘಟನೆ ದಾವಣಗೆರೆಯ ಜಿಲ್ಲೆಯ ಕೊಡಗನೂರಿನಲ್ಲಿ ನಡೆದಿದೆ.
ದಾವಣಗೆರೆಯ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರಾ ಎಂಬಾಕೆಯ ಹಿಂದೆ ಬಿದ್ದ ಸಚಿನ್ ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಕಾವ್ಯ ತವರು ಸೇರಿದ್ದಳು. ಮತ್ತೆ ಜ.6ರಂದು ಆಕೆಯನ್ನು ಸಚಿನ್ ಮರಳಿ ಕರೆದುಕೊಂಡು ಬಂದಿದ್ದ. ಈ ವೇಳೆ ಮತ್ತೆ ಗಲಾಟೆಯಾಗಿದ್ದು, ಚೈತ್ರಾ ಹಾಗೂ ಸಚಿನ್ ಸೇರಿ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಬಳಿಕ ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದು ಹೋಗಿದ್ದಾರೆ.
ಹತ್ಯೆಯಾದ ಮಹಿಳೆಯನ್ನು ಹೊಳಲ್ಕೆರೆಯ ಸಾಸಲುಹಳ್ಳ ಗ್ರಾಮದ ಕಾವ್ಯಾ ಎಂದು ಗುರುತಿಸಲಾಗಿದೆ. ಕಾವ್ಯಾಳನ್ನು ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎಂಬಾತನಿಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಮಗು ಕೂಡ ಇತ್ತು. ಇಷ್ಟಾದರೂ ಸಚಿನ್ ಬೇರೆ ಹೆಣ್ಣಿನ ಸಹವಾಸದಿಂದ ಪತ್ನಿಯನ್ನು ಹತ್ಯೆಗೈದಿದ್ದಾನೆ.
ಇತ್ತ ಕಾವ್ಯಾಳ ಸುಳಿವಿಲ್ಲದೇ ಇರುವುದರಿಂದ ಅನುಮಾನಗೊಂಡ ಆಕೆಯ ಪೋಷಕರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಸಚಿನ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾನೆ.ಇದೀಗ ಪೊಲೀಸರು ಚೈತ್ರಾ ಹಾಗೂ ಸಚಿನ್ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.