ಬೆಳಗಾವಿ: ಜಿಲ್ಲೆಯಲ್ಲಿ ವಿಚಿತ್ರ ಘಟನೆ ಎನ್ನುವಂತೆ ಪ್ರಿಯಕರನೊಂದಿಗೆ ಓಡಿ ಹೋದಂತ ಮಗಳನ್ನು ಸತ್ತು ಹೋಗಿದ್ದಾಳೆ ಅಂತ ಶ್ರದ್ಧಾಂಜಲಿ ಬ್ಯಾನರ್ ಅನ್ನು ತಂದೆಯೊಬ್ಬರು ಹಾಕಿದ್ದಾರೆ. ಇದಷ್ಟೇ ಅಲ್ಲದೇ ಇಡೀ ಊರಿಗೆ ಮಗಳು ಸತ್ತು ಹೋದಳು ಅಂತ ತಿಥಿ ಊಟ ಕೂಡ ಹಾಕಿಸಿರುವಂತ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನಾಗರಾಳ ಗ್ರಾಮದಲ್ಲೇ ಇಂತಹ ವಿಚಿತ್ರ ಘಟನೆ ನಡೆದಿದೆ. ನಾಗರಾಳ ಗ್ರಾಮದ ಶಿವಗೌಡ ಪಾಟೀಲ್ ಅವರಿಗೆ ನಾಲ್ವರು ಪುತ್ರಿಯರು. ಇವರಲ್ಲಿ ಕೊನೆಯ ಮಗಳು ನಾಗರಾಳ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ತಂದೆ ಎಷ್ಟೇ ಬುದ್ಧಿವಾದ ಹೇಳಿದರೂ ಬಿಡದೇ, ಆತನೊಂದಿಗೆ ಓಡಿ ಹೋಗಿದ್ದಾಳೆ.
ಮಗಳು ಪ್ರಿಯಕರನೊಂದಿಗೆ ಹೋಗಿದ್ದರಿಂದ ಸಿಟ್ಟುಗೊಂಡಂತ ತಂದೆ ಶಿವಗೌಡ ಪಾಟೀಲ್ ಅವರು, ತಮ್ಮ ಮಗಳು ಸತ್ತು ಹೋಗಿದ್ದಾಳೆ ಅಂತ ಶ್ರದ್ಧಾಂಜಲಿ ಬ್ಯಾನರ್ ಅನ್ನು ಊರಲ್ಲಿ ಹಾಕಿಸಿದ್ದಾರೆ. ಇದಷ್ಟೇ ಅಲ್ಲದೇ ತನ್ನ ಮಗಳು ಸತ್ತು ಹೋಗಿದ್ದಾಳೆ ಎಂಬ ಕಾರಣಕ್ಕೆ ತಿಥಿ ಊಟವನ್ನು ಇಡೀ ಊರಿನ ಜನರನ್ನೇ ಕರೆದು ಹಾಕಿಸಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಶಿವಗೌಡ ಪಾಟೀಲ್ ಅವರು ಆರಂಭದಲ್ಲಿ ಕೊನೆಯ ಮಗಳು ಕಾಣೆಯಾಗಿದ್ದಾಳೆ ಎಂಬುದಾಗಿ ರಾಯಭಾಗ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಪ್ರಿಯಕರನೊಂದಿಗೆ ಓಡಿ ಹೋಗಿರುವಂತ ಮಾಹಿತಿ ತಿಳಿದು ಬಂದಿತ್ತು. ಇದೇ ಮಾಹಿತಿಯನ್ನು ತಂದೆ ಶಿವಗೌಡ ಪಾಟೀಲ್ ಗೆ ನೀಡಿದ್ದರು. ಇದರಿಂದ ಮನನೊಂದ ತಂದೆ ಹೀಗೆ ಮಾಡಿದ್ದಾರೆ.