ಚಿಕ್ಕಮಗಳೂರು : ದತ್ತಪೀಠದಲ್ಲಿ ಶ್ರೀರಾಮ ಸೇನೆ ಹಮ್ಮಿಗೊಂಡಿರುವ ದತ್ತಮಾಲಾ ಅಭಿಮಾನವೂ ನಾಳೆಗೆ (ನ13) ಮುಕ್ತಾಯವಾಗಲಿದೆ. ದತ್ತಮಾಲಾ ಅಭಿಯಾನದ ಕೊನೆಯ ದಿನವಾದ ನಾಳೆ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿ ಶ್ರೀರಾಮ ಸೇನೆ ನವೆಂಬರ್ 7 ರಿಂದ 13 ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ದತ್ತಪೀಠಕ್ಕೆ ತೆರಳುವ ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಮುಖಂಡರು ಈಗಾಗಲೇ ದತ್ತಮಾಲೆಯನ್ನು ಧರಿಸಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ್ ಮಾಡಿದ್ದು, ಜಿಲ್ಲಾಡಳಿತ 23 ಚೆಕ್ ಪೋಸ್ ತೆರೆದಿದೆ.ಅದೇ ರೀತಿ ಜಿಲ್ಲಾ ಪೊಲೀಸ್ ಇಲಾಖೆ ಪ್ರತ್ಯೇಕವಾಗಿ 26 ಚೆಕ್ ಪೋಸ್ಟ್ ತೆರೆದಿದೆ. ಭದ್ರತೆಗಾಗಿ ಡಿವೈಎಸ್ಪಿ- 3, ಸಿಪಿಐ- 18, ಪಿಎಸ್ಐ- 67, ಎಎಸ್ಐ- 142 , ಪಿಸಿ/ಎಚ್ಸಿ- 841 , ಹೋಂ ಗಾರ್ಡ್- 200, ಕೆಎಸ್ಆರ್ಪಿ ತುಕಡಿ- 5, ಡಿಎಆರ್ ತುಕಡಿ- 11 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರವಾಸಿಗರಿಗೆ ನಿರ್ಬಂಧ
ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ನವೆಂಬರ್ 13ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 14ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರ ನಿಷೇಧ ನಿರ್ಬಂಧವಿಧಿಸಲಾಗಿದೆ.