ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ. ಕೊಲೆಯಾದ ವ್ಯಕ್ತಿ ಹಾಗು ಆತನ ಪತ್ನಿಯ ಸಹೋದರ ಹಾಗೂ ಸಂಬಂಧಿಯಿಂದ ನಡೆದ ಕೊಲೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಪ್ರಕರಣದಲ್ಲಿ ವ್ಯಕ್ತಿಯ ಮಗನೂ ಭಾಗಿಯಾಗಿದ್ದು, ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
73 ವರ್ಷದ ಕೆ.ಸಿ. ವರ್ಗೀಸ್ ಕೊಲೆಯಾದ ವ್ಯಕ್ತಿ. ಈತನ ಮಗ ಕೆ.ವಿ. ತೋಮಸ್ ಹಾಗೇ ಮೃತನ ಪತ್ನಿಯ ಸಹೋದರ ಸಿ.ಟಿ. ರಾಜು, ಸಂಬಂಧಿ ಚಾಕೊಚ್ಚ ಬಂಧಿತರು.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಇದೇ ಫೆಬ್ರವರಿ 9ರಂದು ಯುಡಿಆರ್ ಅಡಿಯಲ್ಲಿ ವರ್ಗೀಸ್ ಅವರದ್ದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿರುತ್ತದೆ. ಆದರೆ ವೈದ್ಯಕೀಯ ವರದಿಯಲ್ಲಿ ತಲೆಗೆ ಉಂಟಾದ ಗಂಭೀರ ಹಲ್ಲೆ ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯಗಳಿಂದ ವರ್ಗೀಸ್ ಮೃತಪಟ್ಟಿರುವುದು ದೃಢಪಟ್ಟಿರುತ್ತದೆ.
ಈ ಹಿನ್ನೆಲೆ ಫೆ. 13 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೊದಲು ದಾಖಲಾಗಿದ್ದ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿ ಪೊಲೀಸರು ತನಿಖೆ ಆರಂಭಿಸಿದರು. ತನಿಖೆಯಲ್ಲಿ ಪೊಲೀಸರು ಮೊದಲು ಮೃತನ ಮಗನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಡೆದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲದಿಂದ ಮಾಹಿತಿ ದೊರೆತಿದೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.








