ಪಶ್ಚಿಮ ಬಂಗಾಳ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹೌರಾ ನಿಲ್ದಾಣದಿಂದ ಹಸಿರು ನಿಶಾನೆ ತೋರಲಿದ್ದಾರೆ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿರುವ ಎರಡನೇ ರಾಷ್ಟ್ರೀಯ ಗಂಗಾ ಮಂಡಳಿ (ನಮಾಮಿ ಗಂಗೆ ಸಂರಕ್ಷಣಾ ಯೋಜನೆ) ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. 2021 ರ ವಿಧಾನಸಭಾ ಚುನಾವಣೆಯ ನಂತರ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡುವುದರ ಜೊತೆಗೆ, ನಗರದ ಮೂರನೇ ಮೆಟ್ರೋ ಮಾರ್ಗವಾದ ಜೋಕಾ-ತಾರತಾಲಾ ಮೆಟ್ರೋ ಮಾರ್ಗಕ್ಕೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿಸಲಿದ್ದಾರೆ. ನಂತರ, ನಮಾಮಿ ಗಂಗೆ ಯೋಜನೆಯ ಸಭೆಯಲ್ಲಿ ಭಾಗವಹಿಸಲು ಮೋದಿ ಅವರು ಭಾರತೀಯ ನೌಕಾಪಡೆಯ ಬಂಗಾಳ ಪ್ರದೇಶದ ಮೂಲ ಕೇಂದ್ರ ಕಚೇರಿಯಾದ ಐಎನ್ಎಸ್ ನೇತಾಜಿ ಸುಭಾಸ್ಗೆ ಆಗಮಿಸಲಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ನಂತರ, ಮೋದಿ ನಗರದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮವನ್ನು ನಡೆಸದೆ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.
“ಉತ್ತರ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಹಸಿರು ನಿಶಾನೆ ತೋರಿಸಲಿದ್ದಾರೆ. ಇದು ಜನರ ಬಹುದಿನಗಳ ಬೇಡಿಕೆಯಾಗಿತ್ತು ವ್ಯಾಪಾರ ಮತ್ತು ಸಂಪರ್ಕ ಸುಧಾರಿಸುತ್ತದೆ, ವಿಶೇಷವಾಗಿ ಉತ್ತರ ಬಂಗಾಳದ ಜನರಿಗೆ ಸಂತಸದ ವಿಚಾರವಾಗಿದೆ ಎಂದು ಬಂಗಾಳದ ಬಿಜೆಪಿ ಸಹ-ವೀಕ್ಷಕ ಅಮಿತ್ ಮಾಳವೀಯ ಹೇಳಿದರು.