ಮುಂಬೈ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಸೆಂಟ್ರಲ್ ಮುಂಬೈನ ವರ್ಲಿ ಚಿತಾಗಾರದಲ್ಲಿ ನಡೆಯಿತು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ ಅಹಮದಾಬಾದ್ನಿಂದ ಹಿಂದಿರುಗುತ್ತಿದ್ದಾಗ ಮಿಸ್ತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಮಿಸ್ತ್ರಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಹೊರತುಪಡಿಸಿ, ಅವರ ಶಪೂರ್ಜಿ ಪಲ್ಲೋಂಜಿ ಗ್ರೂಪ್ನ ನೂರಾರು ಉದ್ಯೋಗಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು, ಇದರಲ್ಲಿ ವಿದೇಶದಿಂದ ಬಂದಿದ್ದ ಹಲವಾರು ಜನರು ಹಾಜರಿದ್ದರು ಕೂಡ.
ಟಾಟಾ ಕುಟುಂಬದ ಸಿಮೋನ್ ಟಾಟಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಲೋಕಸಭಾ ಸಂಸದೆ ಸುಪ್ರಿಯಾ ಸುಳೆ, ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ, ಚಲನಚಿತ್ರ ನಿರ್ಮಾಪಕ ರೋನಿ ಸ್ಕ್ರೂವಾಲಾ, ಎಚ್ಡಿಎಫ್ಸಿ ಅಧ್ಯಕ್ಷ ದೀಪಕ್ ಪಾರೇಖ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಮುಕೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ, ಮಹಾನಾರ್ಯಮನ್ ಸಿಂಧಿಯಾ (ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ) ಬಿಜೆಪಿ ಶಾಸಕ ಗಣೇಶ್ ನಾಯಕ್ ಮತ್ತು ಹಿರಿಯ ವಕೀಲ ಆಬಾದ್ ಪೋಂಡಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.