ಬೆಂಗಳೂರು: ಪಕ್ಕದ ಮನೆಯ ಸಾಕು ನಾಯಿ ತನ್ನ ಪತ್ನಿಯನ್ನು ನೋಡಿ ಬೊಗಳಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನಾಯಿಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿರುವ ಅಮಾನವೀಯ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿವರ: ಅವರೆಹಳ್ಳಿಯ ನಿವಾಸಿ ಆಂಜಿನಪ್ಪ ಎಂಬುವವರು ‘ಸ್ಕೂಬಿ’ ಎಂಬ ಹೆಸರಿನ ನಾಯಿಯನ್ನು ಸಾಕಿದ್ದರು. ಏಪ್ರಿಲ್ 11ರ ಶನಿವಾರ ಸಂಜೆ ಆಂಜಿನಪ್ಪ ಅವರ ಪಕ್ಕದ ಮನೆಯ ಮಹಿಳೆಯೊಬ್ಬರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಗೇಟಿನ ಒಳಗಿದ್ದ ಸ್ಕೂಬಿ ಅವರನ್ನು ನೋಡಿ ಬೊಗಳಿದೆ. ಈ ವಿಷಯ ತಿಳಿದ ಮಹಿಳೆಯ ಪತಿ ಗೋಪಿ ತೀವ್ರ ಆಕ್ರೋಶಗೊಂಡಿದ್ದಾನೆ.
ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ: ಅಂದೇ ರಾತ್ರಿ ಆಂಜಿನಪ್ಪ ಅವರ ಮನೆಗೆ ತೆರಳಿದ ಗೋಪಿ, ಗೇಟಿನಲ್ಲಿ ಕಟ್ಟಿದ್ದ ಸ್ಕೂಬಿ ಮೇಲೆ ಕಟ್ಟಿಗೆಯಿಂದ ಮನಬಂದಂತೆ ದಾಳಿ ಮಾಡಿದ್ದಾನೆ. ಗೋಪಿ ನೀಡಿದ ಭೀಕರ ಏಟುಗಳಿಗೆ ಸ್ಕೂಬಿ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಕುಸಿದು ಬಿದ್ದಿದೆ. ನಾಯಿಯ ಚೀರಾಟ ಕೇಳಿ ಮನೆಯವರು ಹೊರಬರುವಷ್ಟರಲ್ಲಿ ಗೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಪಕ್ಕದ ಮನೆಯ ವ್ಯಕ್ತಿ ನಾಯಿಯ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ತಕ್ಷಣವೇ ಎಚ್ಚೆತ್ತ ಮಾಲೀಕ ಆಂಜಿನಪ್ಪ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ಕೂಬಿಯನ್ನು ಪ್ರಾಣಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರಿಂದ ಸ್ಕೂಬಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ದೂರು ದಾಖಲು: ಈ ಘಟನೆಗೆ ಸಂಬಂಧಿಸಿದಂತೆ ಮಾಲೀಕ ಆಂಜಿನಪ್ಪ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಾಣಿಗಳ ಮೇಲಿನ ಇಂತಹ ದೌರ್ಜನ್ಯದ ವಿರುದ್ಧ ಸ್ಥಳೀಯರು ಮತ್ತು ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ನಿ ತನ್ನ ಜೀವನಾಂಶದ ಹಕ್ಕನ್ನು ಬಿಟ್ಟುಕೊಡುವ ಒಪ್ಪಂದ ಕಾನೂನುಬಾಹಿರ: ಹೈಕೋರ್ಟ್ ಮಹತ್ವದ ತೀರ್ಪು








