ಲಂಡನ್/ನ್ಯೂಯಾರ್ಕ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಗಗನಕ್ಕೇರಿದ್ದ ಕಚ್ಚಾ ತೈಲದ ಬೆಲೆಗಳು ಬುಧವಾರದ ವಹಿವಾಟಿನಲ್ಲಿ ಶೇ. 5ಕ್ಕೂ ಹೆಚ್ಚು ಕುಸಿತ ಕಂಡಿವೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿಢೀರ್ ಇಳಿಕೆಯಾಗಿದೆ.
ಅಂತರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 5.2% ರಷ್ಟು ಕುಸಿದು, ಹೂಡಿಕೆದಾರರಲ್ಲಿ ನೆಮ್ಮದಿ ಮೂಡಿಸಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆಯೂ ಸಹ ಗಣನೀಯವಾಗಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸ್ಥಿರತೆಯ ಮುನ್ಸೂಚನೆ ನೀಡಿದೆ.
ತೈಲ ಬೆಲೆಯಲ್ಲಿನ ಈ ಕುಸಿತವು ಭಾರತದಂತಹ ತೈಲ ಆಮದು ಅವಲಂಬಿತ ದೇಶಕ್ಕೆ ದೊಡ್ಡ ವರದಾನವಾಗಲಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಸದ್ಯಕ್ಕೆ ತಪ್ಪಿದಂತಾಗಿದೆ.








