ಹೈದರಾಬಾದ್: ಪ್ರೀತಿ, ಮದುವೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಮಿತಿಮೀರುತ್ತಿವೆ ಎಂಬುದಕ್ಕೆ ಹೈದರಾಬಾದ್‌ನಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಗೆ ಯುವಕನೊಬ್ಬ ಬಲವಂತವಾಗಿ ಹೆಚ್‌ಐವಿ ಪಾಸಿಟಿವ್ (HIV Positive) ರಕ್ತವಿರುವ ಇಂಜೆಕ್ಷನ್ ನೀಡಿದ ಘಟನೆ ಮೆಡ್ಚಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಮೆಡ್ಚಲ್ ನಿವಾಸಿಯಾಗಿರುವ ಮನೋಹರ್ ಎಂಬ ಯುವಕನೊಂದಿಗೆ ಸಂತ್ರಸ್ತ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆಗೆ ಮುನ್ನ ಯುವಕನಿಗೆ ಹೆಚ್‌ಐವಿ ಪಾಸಿಟಿವ್ ಇರುವುದು ಯುವತಿಯ ಗಮನಕ್ಕೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ತನ್ನ ಜೀವನದ ಹಿತದೃಷ್ಟಿಯಿಂದ ಆಕೆ ಈ ಮದುವೆಯನ್ನು ನಿರಾಕರಿಸಿದ್ದಾಳೆ.
ಮಾರ್ಚ್ 11ರಂದು ನಡೆದ ಅಟ್ಟಹಾಸ:
ಮದುವೆ ನಿಂತು ಹೋದ ಕಾರಣ ಆಕ್ರೋಶಗೊಂಡಿದ್ದ ಮನೋಹರ್, ಮಾರ್ಚ್ 11 ರಂದು ಯುವತಿಯನ್ನು ಭೇಟಿಯಾಗಿ ಮದುವೆಯಾಗುವಂತೆ ತೀವ್ರ ಒತ್ತಾಯ ಮಾಡಿದ್ದಾನೆ. ಆಕೆ ತನ್ನ ನಿರ್ಧಾರಕ್ಕೆ ಬದ್ಧಳಾಗಿ ಮದುವೆ ಅಸಾಧ್ಯವೆಂದು ಹೇಳಿದಾಗ, ಕೆರಳಿದ ಮನೋಹರ್ ತನ್ನ ಬಳಿ ಇದ್ದ ಹೆಚ್‌ಐವಿ ಪಾಸಿಟಿವ್ ರಕ್ತದ ಇಂಜೆಕ್ಷನ್ ಅನ್ನು ಆಕೆಗೆ ಬಲವಂತವಾಗಿ ಚುಚ್ಚಿದ್ದಾನೆ.
ಆಸ್ಪತ್ರೆಗೆ ದಾಖಲು – ಆರೋಪಿಯ ಬಂಧನ:
ಇಂಜೆಕ್ಷನ್ ನೀಡಿದ ಕೆಲವೇ ಸಮಯದಲ್ಲಿ ಯುವತಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಆಕೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಪೋಷಕರಿಗೆ ವಿವರಿಸಿದ್ದಾಳೆ. ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಯುವತಿಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಮನೋಹರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಜೀವನದ ಜೊತೆ ಚೆಲ್ಲಾಟವಾಡಿದ ಯುವಕನ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!
ಮೊಸರು ಬೇಗನೆ ಹಾಳಾಗುತ್ತದೆಯೇ? ಹೀಗೆ ಸಂಗ್ರಹಿಸಿದರೆ, ಒಂದು ವಾರ ತಾಜಾವಾಗಿರುತ್ತದೆ!








