ವಿಜಯಪುರ : ನಗರದಲ್ಲಿ ನಕಲಿ ತುಪ್ಪದ ಮಾರಾಟ ಜಾಲ ಪತ್ತೆಯಾಗಿದ್ದು, ಜಾಲವನ್ನು ಬೇಧಿಸಿದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಆಧಿಕಾರಿಗಳು ಓರ್ವನ ಸಹಿತ 30 ಕೆ.ಜಿ.ಗೂ ಅಧಿಕ ನಕಲಿ ತುಪ್ಪ ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಖಾಸಗಿ ಬಸ್ ಮೂಲಕ ನಗರಕ್ಕೆ ತಂದು ವಿಜಯಪುರದಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದರು. ಈ ಕೃತ್ಯದಲ್ಲಿ ರವಿ ನಿಂಗನಗೌಡ ಬಿರಾದಾರ ಹಾಗೂ ಇನ್ನಿತರರು ಸೇರಿಕೊಂಡು ಮಾರಾಟ ಮಾಡ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಕಲಿ ತುಪ್ಪ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಮಟೀರಿಯಲ್ ಹಾಗೂ ಬಿಲ್ ಬುಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ರವಿಯನ್ನು ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ವಶಕ್ಕೆ ಪಡೆದ ನಕಲಿ ತುಪ್ಪವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದ ಅಧಿಕಾರಿಗಳು, ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.