ಬೆಂಗಳೂರು: ವಿಷಯ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ಯಾರಂಟಿ’ ಯೋಜನೆಗಳ ಕುರಿತು ಪಕ್ಷದ ಕೆಲವು ನಾಯಕರು, ಶಾಸಕರು, ಸಚಿವರು ನಿಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು, ಪರಿಷತ್ ಸದಸ್ಯ ದಿನೇಶ್ ಗೂಳಿ ಗೌಡ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಕರ್ನಾಟಕ ರಾಜ್ಯದ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಜನವಿರೋದಿ ನೀತಿಗಳ ಕಾರಣದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡ ಮತ್ತು ಮಧ್ಯಮ ವರ್ಗದ ಹಿತದೃಷ್ಟಿಯಿಂದ ಕೇಂದ್ರ ನಾಯಕರು ಮತ್ತು ತಮ್ಮಗಳ ಸಮ್ಮತಿಯಿಂದ ಮಹತ್ವ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪ್ರತಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನು ಹಂಚಿ ಆಶ್ವಾಸನೆ ನೀಡಿತ್ತು. ಇದರ ಬಗ್ಗೆ ಐತಿಹಾಸಿಕ ಪ್ರಣಾಳಿಕೆಯನ್ನು ತಯಾರಿಸಿ ಅದನ್ನು ಜನರ ಮುಂದಿಟ್ಟು ವಾಗ್ದನ ಮಾಡಿತ್ತು. ಆ ವಾಗ್ದಾನದ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ 136 ಸ್ಥಾನಗಳಲ್ಲಿ ಅಭೂತಪೂರ್ವ ಜಯಕ್ಕೆ ಕಾರಣಿ ಭೂತರಾದರು ಎಂದಿದ್ದಾರೆ.
ಅಭೂತಪೂರ್ವ ಜನಬಲದೊಂದಿಗೆ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವಿಕರಿಸಿದ ದಿನವೇ ಕ್ಯಾಬಿನೆಟ್ ಸಭೆ ನಡೆಸಿ ಪ್ರಥಮ ಸಂಪುಟ ಸಭೆಯಲ್ಲಿಯೆ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು ಸದರಿ ಗ್ಯಾರಂಟಿಗಳನ್ನು ಸರ್ಕಾರವು 9 ತಿಂಗಳಲ್ಲಿ ಭರವಸೆ ನೀಡಿದಂತೆ ಜಾರಿಗೆ ತಂದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಈಗ ಇಡೀ ದೇಶಕ್ಕೇ ಮಾದರಿಯಾದ ಕ್ರಾಂತಿಕಾರಿ ಯೋಜನೆಯಾಗಿದೆ. ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಸರ್ಕಾರದಿಂದ ನೀಡುವ ಎರಡು ಸಾವಿರ ರೂ. ಉಳಿಸಿಕೊಂಡು ಬಂಗಾರ ಖರೀದಿ ಮಾಡಿದ ಮಹಿಳೆಯರಿದ್ದಾರೆ. ಫ್ರಿಜ್ ಖರೀದಿಸಿದವರಿದ್ದಾರೆ. ಸ್ಮಾರ್ಟ್ ಫೋನ್’ಗಳನ್ನು ಖರೀದಿಮಾಡಿದವರಿದ್ದಾರೆ. ಈ ಹಣ ಮಕ್ಕಳ ಶಿಕ್ಷಣಕ್ಕೆ, ಹಿರಿಯರ ಔಷಧಕ್ಕೆ ಸಹ ನೆರವಾಗುತ್ತಿದೆ ಎಂದು ಅದೆಷ್ಟೋ ಮಂದಿ ಹೇಳಿದ್ದಾರೆ. ನಮ್ಮ ಸರ್ಕಾರವನ್ನು ಹಾರೈಸಿದ್ದಾರೆ ಎಂದು ಹೇಳಿದ್ದಾರೆ.
ಬಡವರಿಗೆ ಊರುಗೋಲು
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದ ಸಾಮಾನ್ಯ ಕುಟುಂಬದ ಮಹಿಳೆಯರು ರಾಜ್ಯದ ತೀರ್ಥ ಕ್ಷೇತ್ರಗಳನ್ನು ನೋಡುವ ಭಾಗ್ಯ ಲಭಿಸಿದೆ. ದೇವಸ್ಥಾನಗಳ ಆದಾಯ ಹೆಚ್ಚಳವಾಗಿದೆ. ಅಲ್ಲದೆ, ಸುತ್ತಮುತ್ತಲಲ್ಲಿ ವ್ಯಾಪಾರ-ವಹಿವಾಟು ಹೆಚ್ಚಳವಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿರುವ ದಿನದಲ್ಲಿ ಗೃಹ ಜ್ಯೋತಿ ಯೋಜನೆಯಡಿ ನೀಡಲಾಗಿರುವ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಡವರಿಗೆ ಊರುಗೋಲಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಸದರಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಉತ್ತೆಜಿತರಾದ ಕೇಂದ್ರದ ಕಾಂಗ್ರೆಸ್ ನಾಯಕತ್ವ ಪ್ರಸ್ತುತ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳ ತದ್ರೂಪಿಯಾಗಿ ರಾಷ್ಟ್ರದ ಜನತೆಗೆ ಮಹಾಲಕ್ಷ್ಮಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿತು. ಇಂಡಿಯಾ ಮೈತ್ರಿ ಕೂಟದ ಮೇಲೆ ವಿಶ್ವಾಸವಿಟ್ಟ ಜನ ಅಪಾರ ಪ್ರಮಾಣದಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಚಗಳ ಅಭ್ಯರ್ಥಿಗಳಿಗೆ ಮತನೀಡಿ ಮೋದಿ ಸರ್ಕಾರ ಮತ್ತೆ ಬಹುಮತ ಪಡೆಯಲು ತಡೆಯೊಡ್ಡಿ ಇಂಡಿಯಾ ಮೈತ್ರಿ ಕೂಟಕ್ಕೆ 235 ಸ್ಥಾನಗಳನ್ನು ಕಲ್ಪಿಸಿ ಅಭೂತಪೂರ್ವ ಬೆಂಬಲ ನೀಡಿದೆ ಅಂತ ತಿಳಿಸಿದ್ದಾರೆ.
ಆದರೆ, ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಉಂಟಾದ ಅಲ್ಪ ಹಿನ್ನಡೆಯಿಂದ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು, ಸಚಿವರು, ಮುಖಂಡರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿದ್ದು ಇಂತಹ ಹೇಳಿಕೆಗಳನ್ನು ಯಾರೂ ಕೊಡದಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಕಠಿಣ ಸೂಚನೆಯನ್ನು ಕೊಡಬೇಕು ಎಂದು ಈ ಮೂಲಕ ಮನವಿ ಮಾಡಿದ್ದಾರೆ.
ಮತಗಳಿಕೆ ಪ್ರಮಾಣದಲ್ಲೂ ಗಣನೀಯ ಏರಿಕೆ
ಇನ್ನು ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನಮನ್ನಣೆ ಗಳಿಸಿರುವುದು ಕಳೆದ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳಿಕೆ ಪ್ರಮಾಣವನ್ನು ನೋಡಿದರೂ ಸಾಕು. ಈಚೆಗೆ ಬಂದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಪಕ್ಷ 9 ಕ್ಷೇತ್ರಗಳನ್ನು ಗೆದ್ದರೂ ಮತಗಳಿಕೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಲಾಗಿದೆ. ಈ ಲೋಕಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಮತಗಳಿಕೆಯಲ್ಲಿ ಶೇಕಡಾ 14ರಷ್ಟು ಹೆಚ್ಚಳ ಕಂಡಿದೆ. ಅಂದರೆ, 2019ರಲ್ಲಿ ಶೇಕಡಾ 31.5ರಷ್ಟಿದ್ದ ಮತ ಪ್ರಮಾಣವು ಈ ಬಾರಿ 45.5ಕ್ಕೆ ಏರಿಕೆಯಾಗಿದೆ. ಅದೇ ಶೇಕಡಾ 51.5ರಷ್ಟಿದ್ದ ಬಿಜೆಪಿ ಮತ ಗಳಿಕೆಯು ಈ ಬಾರಿ ಶೇಕಡಾ 46ಕ್ಕೆ ಕುಸಿತ ಕಂಡಿದೆ. ಇದು ಕಾಂಗ್ರೆಸ್ ಬಗ್ಗೆ ಜನರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಅಲ್ಲದೆ, 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ನೋಡುವುದಾದರೆ, ಕಾಂಗ್ರೆಸ್ 136 ಸ್ಥಾನ ಗಳಿಸಿದರೆ, ಬಿಜೆಪಿ 66 ಸ್ಥಾನ ಹಾಗೂ ಜೆಡಿಎಸ್ 19 ಸ್ಥಾನಗಳನ್ನು ಗಳಿಸಿತ್ತು. ಶೇಕಡಾವಾರು ಮತಗಳಿಕೆ ಪ್ರಮಾಣವನ್ನು ಗಮನಿಸುವುದಾದರೆ, ಕಾಂಗ್ರೆಸ್ ಶೇಕಡಾ 42.88, ಬಿಜೆಪಿಯು ಶೇಕಡಾ 36 ಹಾಗೂ ಜೆಡಿಎಸ್ ಶೇಕಡಾ 13.29 ರಷ್ಟು ಮತಗಳಿಕೆ ಮಾಡಿತ್ತು. ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಮತ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿತ್ತು. ಹೀಗಾಗಿ ಸ್ಥಾನಗಳು ಕಡಿಮೆಯಾಗಿವೇ ವಿನಃ ಜನರ ನಂಬಿಕೆ ಅಲ್ಲ ಎಂಬುದು ಇದರಿಂದಲೇ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಹೇಳಿಕೆಗಳಿಗೆ ಕೂಡಲೇ ಕಡಿವಾಣ ಬೀಳಲಿ
ಈ ಗ್ಯಾರಂಟಿ ಯೋಜನೆಗಳಿಗೆ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರು, ರಾಷ್ಟ್ರೀಯ ನಾಯಕರಾದ ಸನ್ಮಾನ್ಯ ರಾಹುಲ್ ಗಾಂಧಿ ಅವರು, ಸನ್ಮಾನ್ಯ ಪ್ರಿಯಾಂಕಾ ಗಾಂಧಿ ಅವರುಗಳು ರಾಜ್ಯಕ್ಕೆ ಬಂದು ಚಾಲನೆ ನೀಡಿದ್ದರು. ಯೋಜನೆಗಳನ್ನು ಶ್ಲಾಘಿಸಿದ್ದರು. ಈ ಯೋಜನೆ ನಿರಂತರವಾಗಿ ಜಾರಿಯಾಗುತ್ತದೆ ಎಂದು ವಾಗ್ದಾನ ನೀಡಿದ್ದರು. ಹೈಕಮಾಂಡ್ ನಿರ್ಣಯದಿಂದ ಜಾರಿಯಾದ ಯೋಜನೆಯನ್ನು ಬಂದ್ ಮಾಡುವಂತೆ ಹೇಳುವ ಅಧಿಕಾರ ಯಾರಿಗೂ ಇಲ್ಲ. ಬಡವರ ಪರವಾದ ಯೋಜನೆಗಳನ್ನು ಬಂದ್ ಮಾಡುವುದಿರಲಿ ಅಂಥ ಹೇಳಿಕೆಗಳಿಂದಲೂ ಪಕ್ಷದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಅಂಥ ಹೇಳಿಕೆಗಳಿಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.
BREAKING: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ‘ಜೆ.ಪಿ ನಡ್ಡಾ’ ರಾಜೀನಾಮೆ | JP Nadda resigns
Modi 3.0: ‘ಕೇಂದ್ರ ಸಚಿವ’ರಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ‘ಮೋದಿ’ಗೆ ಧನ್ಯವಾದ ಅರ್ಪಿಸಿದ ‘HD ಕುಮಾರಸ್ವಾಮಿ’