ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಅದು ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳು 23ರಂದು ನಾಮಫಲಕ ಅಭಿಯಾನ ನಡೆಸಲು ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸುತ್ತೋಲೆ ಹೊರಡಿಸಿದ್ದಾರೆ. ಆ ನಾಮಫಲಕದಲ್ಲಿ ನನಗೆ ಯಾರು ಲಂಚ ಕೊಡಬೇಕಿಲ್ಲ.
ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂದು ತಿಳಿಸಿದೆ. ಇದನ್ನು ಸರ್ಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಾಕಬೇಕು ಎಂದು ಹೇಳಿದ್ದಾರೆ. ಈ ಅಭಿಯಾನವನ್ನು ನಿಗದಿತ ಕಾಲಾವಧಿಯಲ್ಲಿ ನಡೆಸಲು ತಿಳಿಸಿದ್ದಾರೆ.
ಹಾಗಾದರೆ ಈ ಅಭಿಯಾನದ ಮುನ್ನ ಹಾಗೂ ಅಭಿಯಾನದ ನಂತರ ಭ್ರಷ್ಟಾಚಾರ ಮಾಡಬಹುದೇ? ಸರ್ಕಾರಕ್ಕೆ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿ ಇದ್ದರೆ ಅವರು ನಾವು ಮಾಡುತ್ತಿರುವ ಅಕ್ರಮ ಹಾಗೂ ಹಗರಣಗಳ ಆರೋಪಗಳ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿತ್ತು. ಆದರೆ ಇಂತಹ ಸುತ್ತೋಲೆಗಳ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.