ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಸರ್ಕಾರ ವಿವಿಧ ಹುದ್ದೆಗಳಿಗೆ ದರ ನಿಗದಿಪಡಿಸಿದೆ ಎಂದು ಆರೋಪಿಸಿ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ‘ಭ್ರಷ್ಟಾಚಾರ ದರ ಪಟ್ಟಿ’ ಎಂಬ ಹೆಸರಿನಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಬಿಜೆಪಿ ದಾಖಲಿಸಿರುವ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಆರೋಪಿಯನ್ನಾಗಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ವಿಚಾರಣೆಯ ವೇಳೆ ರಾಹುಲ್ ಪರ ವಾದ ಮಂಡಿಸಿದ ವಕೀಲರು, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಜಾಹೀರಾತಿಗೆ ಸಂಬಂಧಿಸಿದಂತೆ ಒಂದು ಟ್ವೀಟ್ಗೆ ರಾಹುಲ್ ಗಾಂಧಿ ಅವರನ್ನು ತಳುಕು ಹಾಕಲು ಯಾವುದೇ ದಾಖಲೆ ಇಲ್ಲ. ಅರ್ಜಿದಾರರನ್ನು ಗುರಿಯಾಗಿಸಬಹುದಾದ ಟ್ವೀಟ್ ಇಲ್ಲವೇ, ಪ್ರಕಟಣೆ ಇಲ್ಲ. ಯಾರೋ ಜಾಹೀರಾತಿನ ಪ್ರಕಟಣೆ ನೀಡಿದ್ದರೂ ಅದು ಸರ್ಕಾರದ ಕುರಿತದ್ದಾಗಿದೆಯೇ ಹೊರತು ಬಿಜೆಪಿಯನ್ನು ಗುರಿಯಾಗಿಸಿಲ್ಲ.
ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡುವಾಗ ಮ್ಯಾಜಿಸ್ಟ್ರೇಟ್ ವಿವೇಚನೆ ಬಳಸಿಲ್ಲ. ಜಾಹೀರಾತು ಪ್ರಕಟಿಸಲು ರಾಹುಲ್ ಗಾಂಧಿ ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲ. ಒಮ್ಮೆ ಸರ್ಕಾರ ಬಂದ ಮೇಲೆ ಅದು ಬಿಜೆಪಿಗೆ ಸೇರುವುದಿಲ್ಲ. ಅದು ಕರ್ನಾಟಕ ಸರ್ಕಾರವಾಗುತ್ತದೆಯೇ ವಿನಾ ಬಿಜೆಪಿ ಸರ್ಕಾರವಾಗುವುದಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ಪರಿಗಣಿಸಿರುವ ಸಂಜ್ಞೆಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಶಾಸನಸಭೆಯ ಸದಸ್ಯರಾದ ಅರ್ಜಿದಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕಿತ್ತು. ಶೇ.40 ಭ್ರಷ್ಟ ಸರ್ಕಾರ ಎಂದು ಹೇಳಿ ಬಿಜೆಪಿಯನ್ನು ಗುರಿಯಾಗಿಸಲಾಗಿತ್ತು. ಬಿಜೆಪಿಯ ವಿರುದ್ಧದ ಈ ದುರುದ್ದೇಶಪೂರಿತ ಪ್ರಚಾರದಿಂದ ಪಕ್ಷದ ಹಲವು ಅಭ್ಯರ್ಥಿಗಳು 500-2000 ಮತಗಳ ಅಂತರದಲ್ಲಿ ಸೋಲನುಭವಿಸಿದಂತಾಗಿತ್ತು ಎಂದು ಪೀಠಕ್ಕೆ ಹೇಳಿದರು. ವಾದ-ಪ್ರತಿವಾದ ಆಲಿಸಿದ ಪೀಠ ಮುಂದಿನ ವಿಚಾರಣೆಯನ್ನು 18ಕ್ಕೆ ಮುಂದೂಡಿತು.








