ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಡ್ರಗ್ಸ್, ಮಾದಕ ವಸ್ತುಗಳ ಮಾರಾಟ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಿಗೂ ಮಾದಕ ವಸ್ತು ಸಾಗಣೆ-ಬಳಕೆ ನಿಯಂತ್ರಣಕ್ಕೆ ಗುರಿ ನಿಗದಿಪಡಿಸುವ ಮೂಲಕ ರಾಜ್ಯವನ್ನು ಮಾದಕ ಮುಕ್ತವನ್ನಾಗಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ನಿನ್ನೆ ವಿಧಾನಸೌಧದಲ್ಲಿ ನಡೆದ 6ನೇ ರಾಜ್ಯ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡ್ರಗ್ಸ್ ತಡೆಗೆ ಸಂಬಂಧಿಸಿದಂತೆ ಮಾಹಿತಿ ಕನ್ನಡದಲ್ಲಿಯೂ ಲಭ್ಯವಾಗುವಂತೆ ವೆಬ್‌ಸೈಟ್ ನವೀಕರಿಸಬೇಕು. ಜತೆಗೆ ಬೆಳಗಾವಿ ಜಿಲ್ಲೆಯಲ್ಲಿ ಅನುಸರಿಸುತ್ತಿರುವ ಕ್ರಮವನ್ನು ಮಾದರಿಯಾಗಿಸಿ ಕೊಂಡು ಇತರ ಜಿಲ್ಲೆಗಳಲ್ಲೂ ಅನುಸರಿಸಬೇಕು. ಮಾದಕ ವಸ್ತುಗಳ ಕಳ್ಳ ಸಾಗಣೆ ತಡೆಯಲು ವಿಮಾನನಿಲ್ದಾಣಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಕಸ್ಟಮ್ಸ್ ಅಧಿಕಾರಿಗಳನ್ನು ಸಮಿತಿಗೆ ಆಹ್ವಾನಿಸಬೇಕು ಎಂದು ಸೂಚಿಸಿದರು.
ನೋಂದಾಯಿತವಲ್ಲದ ಔಷಧ ಸಂಸ್ಥೆಗಳನ್ನು ಗುರುತಿಸಿ ಅವುಗಳವಿರುದ್ಧಕ್ರಮಕೈಗೊಳ್ಳಬೇಕು. ವ್ಯಸನ ಮುಕ್ತ ಕೇಂದ್ರಗಳ ನಿರ್ವಹಣೆಗೆ ಸುಧಾರಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಗಳನ್ನು ರೂಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಒಂದು ಕೇಂದ್ರಕ್ಕೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳುಮತ್ತು ಸಂಬಂಧಿತ ಇಲಾಖೆಗಳಸಿಬ್ಬಂದಿ, ಅಧಿಕಾರಿಗಳಿಗೆ ಮ್ಯಾಪ್-ಡ್ರಗ್ಸ್ ಆ್ಯಪ್ ಬಳಕೆ ಕುರಿತು ತರಬೇತಿ ನೀಡಬೇಕು ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ ಡ್ರಗ್ ಟೆಸ್ಟಿಂಗ್ ಕಿಟ್ ಬಳಸಿ ವಿದ್ಯಾರ್ಥಿಗಳನ್ನು ಪರೀಕ್ಷಿಸಬೇಕು. ಪರೀಕ್ಷೆಯಲ್ಲಿ ಪಾಸಿಟಿವ್ ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಬೇಕು. ಎಎನ್‌ಟಿಎಫ್ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಉಪಸಮಿತಿಗಳನ್ನು ರಚಿಸಬೇಕು. ಕೆಂಪು ಪಟ್ಟಿಯಲ್ಲಿರುವ ಔಷಧಗಳ ಮಾರಾಟ ನಿಯಂತ್ರಿಸಲು ಮೇಲ್ವಿಚಾರಣೆ ಕಾರ್ಯ ಬಲಗೊಳಿಸಬೇಕು ಎಂದು ತಿಳಿಸಿದರು.