ಮಂಡ್ಯ :- ವಿಸಿ ನಾಲೆ ಮೂಲಕ ಮದ್ದೂರು ತಾಲೂಕಿನ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಗುರುವಾರ ಪಟ್ಟಣದ ಕಾವೇರಿ ನೀರಾವರಿ ನಿಗಮದ ಉಪ ವಿಭಾಗದ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಸಿ.ಉಮೇಶ್ ನೇತೃತ್ವದಲ್ಲಿ ಕಛೇರಿಗೆ ಮುತ್ತಿಗೆ ಹಾಕಿದ ಸಿಎ ಕೆರೆ, ಬೆಸಗರಹಳ್ಳಿ, ಕಸಬಾ ಹೋಬಳಿಯ ನೂರಾರು ರೈತರು ಧರಣಿ ನಡೆಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ವಿಸಿ ನಾಲೆಯ ಕೊನೆ ಭಾಗದ ಜಮೀನುಗಳಿಗೆ ನಾಲೆ ಮೂಲಕ ನೀರು ಹರಿಸಿ ಬೆಳೆ ರಕ್ಷಣೆ ಮಾಡಬೇಕು ಹಾಗೂ ಕಟ್ಟು ಪದ್ದತಿ ರದ್ದುಪಡಿಸಿ ನಿರಂತರವಾಗಿ ಮುಂಗಾರು ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಮ್ಮಣ್ಣುನಾಲೆ ಆಧುನೀಕರಣ ಕಾರ್ಯ ಮದ್ದೂರು ತಾಲೂಕಿನಲ್ಲಿ ಮಾತ್ರ ನಡೆಯುತ್ತಿದ್ದು, ಕಾಲುವೆ ಕಾಮಗಾರಿಯನ್ನು ಮುಂದೂಡಬೇಕು. ಕೆಮ್ಮಣ್ಣು ನಾಲಾ ಕಾಮಗಾರಿ ನಡೆಯುತ್ತಿರುವ ಹೊರತು ಪಡಿಸಿ ನಗರಕೆರೆ, ಸೋಂಪುರ, ಗೊರವನಹಳ್ಳಿ ವ್ಯಾಪ್ತಿಯ 23, 24 ಹಾಗೂ 25 ನೇ ನಾಲೆಗಳಿಂದ ನೀರು ಹರಿಸಿ ವಿಸಿ ನಾಲೆಗಳ ಕೊನೆ ಭಾಗಕ್ಕೆ ನೀರು ಹರಿಸಿ ಬೆಳೆ ರಕ್ಷಣೆ ಮಾಡಬೇಕು ಎಂದು ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಜಿ.ಎ.ಶಂಕರ್, ಲಿಂಗಾಪ್ಪಾಜಿ ಸೇರಿದಂತೆ ಹಲವು ರೈತ ಮುಖಂಡರು ಸಾಮೂಹಿಕವಾಗಿ ಒತ್ತಾಯ ಮಾಡಿದರು.
ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಿ 3 ತಿಂಗಳಾದರೂ ಸಹ ಸರ್ಕಾರ ಹಣ ಪಾವತಿ ಮಾಡಿಲ್ಲ ಹೀಗಾಗಿ ಮಂಡ್ಯ ಜಿಲ್ಲೆಯೊಂದರಲ್ಲೆ 250 ರಿಂದ 300 ಕೋಟಿ ಬಾಕಿ ಉಳಿಸಿಕೊಂಡಿದೆ ಹೀಗಾಗಿ ತಕ್ಷಣವೇ ಈ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ರೈತ ಮುಖಂಡರಾದ ವರದರಾಜು, ಶೆಟ್ಟಿಹಳ್ಳಿ ರವಿಕುಮಾರ್, ಗೊಲ್ಲರದೊಡ್ಡಿ ಅಶೋಕ್, ಈರಪ್ಪ, ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ