ಆಂಧ್ರಪ್ರದೇಶ : ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈಎಸ್ ಆರ್‌ಪಿಸಿ ನಾಯಕ ಅಂಬಟಿ ರಾಮಬಾಬುಗೆ ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ ಕೇಳಿ ಬಂದಿದ್ದು ಶನಿವಾರ ತಡರಾತ್ರಿ ಗುಂಟೂರು ಪೊಲೀಸರು ಬಂಧಿಸಿದ ಮಾಜಿ ಸಚಿವ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಅಂಬಟಿ ರಾಂಬಾಬು ಅವರನ್ನು ಭಾನುವಾರ ಸಂಜೆಯವರೆಗೆ ನಲ್ಲಪಾಡು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ರಾಂಬಾಬು ಅವರನ್ನು ಅವರ ನಿವಾಸದಿಂದ ಪೊಲೀಸರು ಬಂಧಿಸಿದರು.
ಮಾಜಿ ಸಚಿವರು ಮಾಡಿದ್ದ ಹೇಳಿಕೆಗಳಿಂದ ಕೋಪಗೊಂಡ ಟಿಡಿಪಿ ನಾಯಕರು ಮತ್ತು ಕಾರ್ಯಕರ್ತರು ರಾಂಬಾಬು ಅವರ ಮನೆಯನ್ನು ಮುತ್ತಿಗೆ ಹಾಕಿ, ಕಲ್ಲು ತೂರಾಟ ನಡೆಸಿ, ಹೂವಿನ ಕುಂಡಗಳು ಮತ್ತು ಕಿಟಕಿ ಗಾಜುಗಳನ್ನು ಹಾನಿಗೊಳಿಸಿದರು ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ. ದುಷ್ಕರ್ಮಿಗಳು ರಾಂಬಾಬು ಅವರ ವಾಹನಕ್ಕೂ ಬೆಂಕಿ ಹಚ್ಚಿ, ರಾಜ್ಯಾದ್ಯಂತ ಅವರ ಪ್ರತಿಕೃತಿಗಳನ್ನು ಸುಟ್ಟು, ಅವರನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.








