ಶಿವಮೊಗ್ಗ: ಕೋರ್ಟ್ ಆದೇಶ ಉಲ್ಲಂಘನೆ ಮಾಡಿ, ಚುನಾವಣೆ ನಡೆಸದೇ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಹಾಲಿ ಸಮಿತಿಯು ಚುನಾವಣೆ ಈವರೆಗೆ ನಡೆಸಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ಶ್ರೀ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮೂರು ತಿಂಗಳ ಒಳಗಾಗಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಲು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ದಿನಾಂಕ 11-07-2025ರಂದು ಆದೇಶ ಮಾಡಿದೆ. ಈ ಆದೇಶದ ಬಳಿಕ 71 ದಿನಗಳ ನಂತರ ದಿನಾಂಕ 20-09-2025ರಂದು ಮಹಾ ಸಭೆ ನಡೆಸಲಾಗಿದೆ. ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಿದರೂ ಕಾರ್ಯಪ್ರವೃತವಾಗದೇ ಕಾಲಹರಣ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ದಿನಾಂಕ 14-10-2025ರಂದು ಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ನಮ್ಮ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದ್ದು, ದಿನಾಂಕ 31-10-2025ಕ್ಕೆ ವಿಚಾರಣೆ ನಡೆಸಲು ನಿಗದಿ ಪಡಿಸಿದೆ. “ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಲ್ಲಿ ಏನಿದೆ ಅಂತದ್ದೇನಿದೆ” ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದಕ್ಕೆ ಎಂಬುದೇ ಗೊತ್ತಾಗುತ್ತಿಲ್ಲ. ನಮ್ಮ ಚಿತ್ತ ಕೋರ್ಟ್ ಆದೇಶದತ್ತ ನೆಟ್ಟಿರುವುದಾಗಿ ಹೇಳಿದರು.
ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಹಾಲಿ ಸಮಿತಿಯವರಿಗೆ ಜಾತ್ರೆ ಪೂರ್ವ ತಯಾರಿ, ದಿನಾಂಕ ನಿಗದಿ ಪಡಿಸೋದಕ್ಕೆ, ನವರಾತ್ರಿ ಉತ್ಸವ ಮಾಡೋದಕ್ಕೆ ಸಮಯ ಇದೆ. ಆದರೆ ಚುನಾವಣೆ ನಡೆಸಿ ನೂತನ ಸಮಿತಿಗೆ ಅಧಿಕಾರ ವಹಿಸಿಕೊಡಲು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಗೋಷ್ಠಿಯ ವೇಳೆ ಜಿಕೆ ಭೈರಪ್ಪ, ರಾಜೇಂದ್ರ ಸಿಂಗ್, ಪದ್ಮನಾಭ್, ಮಂಜಪ್ಪ, ಪ್ರಜ್ವಲ್, ಜನಾರ್ಧನ ಆಚಾರಿ, ಕೃಷ್ಣ ಮೂರ್ತಿ, ಧರ್ಮರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..