ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆಯ 2ಕ್ಕೆ ಏರಿದೆ. ಈವರೆಗೆ ಗ್ರಾಮದ 186 ಮಂದಿ ಅಸ್ವಸ್ಥರಾಗಿದ್ದಾರೆ.
ಈ ಪೈಕಿ 12 ಬಾಲಕರು, 8 ಬಾಲಕಿಯರು ಸೇರಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವ 94 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಹುತೇಕರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಶಿವಪ್ಪ ಯಂಡಿಗೇರಿ ಮತ್ತು ನಿಂಗಪ್ಪ ಹಾವಳ್ಳಿ ಕಲುಷಿತ ನೀರು ಸೇವನೆಯ ನಂತರ ಕಾಣಿಸಿಕೊಂಡ ಆರೋಗ್ಯ ವೈಪರಿತ್ಯದಿಂದ ಮೃತಪಟ್ಟರು. ಬಹುತೇಕ ಗ್ರಾಮಸ್ಥರು ನಿತ್ರಾಣರಾಗಿದ್ದು, ಊರಿನಲ್ಲಿ ಉತ್ಸಾಹವೇ ಇಲ್ಲದ ನೀರಸ ವಾತಾವರಣ ನೆಲೆಸಿದೆ. ಗ್ರಾಮದ ನೂರಕ್ಕೂ ಹೆಚ್ಚು ಮಂದಿಯ ಅನಾರೋಗ್ಯಕ್ಕೆ ಕಲುಷಿತ ಕುಡಿಯುವ ನೀರು ಮುಖ್ಯ ಕಾರಣ. ನೀರು ಪೂರೈಕೆ ಮಾಡಲೆಂದು ಅಳವಡಿಸಿದ್ದ ಪೈಪ್ ಒಡೆದು, ಅದಕ್ಕೆ ಚರಂಡಿ ನೀರು ಬೆರೆತಿದ್ದು ಪರಿಸ್ಥಿತಿ ಈ ಪ್ರಮಾಣದಲ್ಲಿ ವಿಷಮಿಸಲು ಕಾರಣವಾಯಿತು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ ತಿಳಿಸಿದ್ದಾರೆ.
ಗ್ರಾಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 8 ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇರುವ ತಂಡವು ಗ್ರಾಮಸ್ಥರ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡುತ್ತಿದೆ. ತುರ್ತು ಬಳಕೆಗೆಂದು ಮೂರು ಆಂಬುಲೆನ್ಸ್ಗಳನ್ನೂ ಗ್ರಾಮದಲ್ಲಿ ನಿಲ್ಲಿಸಲಾಗಿದೆ.
ಪರಿಹಾರ ಗೊಂದಲ
ವಾಂತಿ ಬೇಧಿಯಿಂದ ಮೃತಪಟ್ಟ ಗ್ರಾಮದ ಶಿವಪ್ಪ ಯಂಡಿಗೇರಿ (70) ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ₹ 10 ಲಕ್ಷ ಬಿಡುಗಡೆ ಮಾಡಿದ್ದಾರೆ. ಆದರೆ ಐದು ದಿನಗಳಿಂದಲೂ ಗ್ರಾಮದ ಹಲವರಲ್ಲಿ ವಾಂತಿ-ಬೇಧಿ ಕಾಣಿಸಿದ್ದು, ಇದೇ ಕಾರಣಕ್ಕೆ ಸರಸ್ವತಿ ಎನ್ನುವವರು ಮೃತಪಟ್ಟಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಈ ಸಾವನ್ನು ವಯೋಸಹಜ ಎಂದು ನಮೂದಿಸಿತ್ತು. ಇದೀಗ ಸರಸ್ವತಿ ಅವರ ಕುಟುಂಬಕ್ಕೂ ಸರ್ಕಾರವು ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.