ಧಾರವಾಡ: ಪದೇ ಪದೇ ಕೈ ಕೊಡುತ್ತಿದ್ದಂತ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ರಿಪೇರಿಯ ನಂತ್ರವೂ ಸರಿಯಾಗದ ಕಾರಣ, ಹೊಸ ಬ್ಯಾಟರಿ ಹಾಕಿಕೊಡುವಂತೆ ಮನವಿ ಮಾಡಿದರೂ ಕೇಳದ ಕಂಪನಿಗೆ ಗ್ರಾಹಕರ ನ್ಯಾಯಾಲಯ ಶಾಕ್ ನೀಡಿದೆ. ಹೊಸ ಬ್ಯಾಟರಿ ಹಾಕಿ, ಇಲ್ಲವೇ ವಾಹನ ಖರೀದಿಸಿದ ಹಣದ ಜೊತೆಗೆ ಶೇ.10ರ ಬಡ್ಡಿ ದರದಲ್ಲಿ ಹಣ ವಾಪಾಸ್ಸು ನೀಡುವಂತೆ ಆದೇಶಿಸಿದೆ.
ಧಾರವಾಡದ ವಿಧ್ಯಾರ್ಥಿನಿಯಾದ ಅನನ್ಯಾ ಅಕ್ಕಿಹಾಳ ದಿ:02/04/2022 ರಂದು ರೂ.80,000 ಪಾವತಿಸಿ ಇಲೆಕ್ಟ್ರೀಕ್ ಸ್ಕೂಟರನ್ನು ಎದುರುದಾರರಾದ ಹೈದರಾಬಾದಿನ ಪ್ಯೂವರ್ ಎನರ್ಜಿ ಇವರಿಂದ ಖರೀದಿಸಿದ್ದರು. ವಾಹನದ ಬ್ಯಾಟರಿಯ ಮೇಲೆ 36 ತಿಂಗಳ ವಾರಂಟಿಯನ್ನು ಹೊಂದಿತ್ತು. ದೂರುದಾರರು ಎದುರುದಾರರ ಹೇಳಿಕೆಯಂತೆ ವಾಹನವನ್ನು ಉಪಯೋಗಿಸುತ್ತಿದ್ದರು. ನಂತರ ಒಂದೇ ವರ್ಷದಲ್ಲಿ ಒಮ್ಮಿಂದೊಮ್ಮೆಲೆ ರಸ್ತೆಯ ಮಧ್ಯ ವಾಹನ ನಿಲ್ಲಲು ಪ್ರಾರಂಭಿಸಿತು. ಅಲ್ಲದೇ ಎದುರುದಾರರು ಹೇಳಿದಷ್ಟು ಮೈಲೇಜನ್ನೂ ಸಹ ವಾಹನವು ಕೊಡುತ್ತಿರಲಿಲ್ಲ. ಈ ವಿಷಯವನ್ನು ದೂರುದಾರರು ಎದುರುದಾರರಿಗೆ ತಿಳಿಸಿದಾಗ ಅದನ್ನು ಸರಿಪಡಿಸಿಕೊಟ್ಟರೂ ಸಹ ವಾಹನವು ಯಥಾ ಪ್ರಕಾರ ಅದೇ ಸಮಸ್ಯೆಗಳನ್ನು ಕೊಡುತ್ತಿತ್ತು. ಎದುರುದಾರರು ದೂರುದಾರರ ಸಮಸ್ಯೆಯನ್ನು ಪರಿಹರಿಸಲಿಲ್ಲ. ಎದುರುದಾರರ ಇಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 01/01/2025 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಾದ ಪ್ಯೂವರ್ ಎನರ್ಜಿ ಇವರಲ್ಲಿ ರೂ.80,000 ಹಣ ಪಾವತಿಸಿ ಪ್ಯೂವರ್ ಎನರ್ಜಿಯ ಇ-ವಾಹನವನ್ನು ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಒಂದು ವರ್ಷದಲ್ಲಿ ವಾರಂಟಿ ಅವಧಿಯಲ್ಲಿ ವಾಹನ ರಸ್ತೆಯ ಮೇಲೆ ನಿಲ್ಲುವುದು ಮತ್ತು ಮೈಲೇಜ್ ಸರಿಯಾಗಿ ಕೊಡದಿರುವುದು ರುಜುವಾತು ಆಗಿದೆ. ಎದುರುದಾರರು ದೂರುದಾರರ ಸಮಸ್ಯೆ ಪರಿಹರಿಸಲು ವಿಫಲರಾಗಿದ್ದಾರೆ. ಈ ಎಲ್ಲ ಸಂಗತಿಗಳು ವಾಹನ ಉತ್ಪಾದನಾ ದೋಷ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ತೀರ್ಪಿನಲ್ಲಿ ಆಯೋಗ ಹೇಳಿದೆ.
ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿಯನ್ನು ಅಳವಡಿಸಿ ಕೊಡಬೇಕು ಅಂತಾ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ. ಒಂದು ವೇಳೆ ಅದನ್ನು ಸರಿಪಡಿಸಿ ಕೊಡದೇ ಇದ್ದಲ್ಲಿ ವಾಹನ ಖರೀದಿಯ ಹಣ ರೂ.80,000 ಮತ್ತು ಅದರ ಮೇಲೆ ಶೆ. 10 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರಳಿಗೆ ಮರಳಿ ಕೊಡಬೇಕು ಅಂತಾ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಪ್ಯೂವರ್ ಎನರ್ಜಿ ಪ್ರೈ.ಲಿ. ಗೆ ನಿರ್ದೇಶಿಸಿದೆ.
ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ.? ಈ ಫ್ಯಾಶನ್ ಡಿಸೈನ್ ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸಿ
BREAKING : ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಸಾಲ ತೀರಿಸಲಾಗದೆ ಕಾರು ಚಾಲಕ ಆತ್ಮಹತ್ಯೆ!