ನವದೆಹಲಿ : ಯುಪಿಐ ಬಳಕೆಯು ಇನ್ನೂ ಸರಳವಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಯುಪಿಐ ಮುಖಾಂತರ ಪಾವತಿ ಮಾಡುವಾಗ ಪಿನ್ ನಮೂದಿಸುವ ಬದಲಿಗೆ ಫೇಸ್ ರೆಕಗ್ನಿಷನ್ ಮತ್ತು ಫಿಂಗರ್ ಪ್ರಿಂಟ್ ಅವಕಾಶ ಕೊಡಲು ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಚಿಂತನೆ ನಡೆಸಿದೆ ಎನ್ನಲಾಗಿದೆ.
ಹೌದು ಈ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಹಾಗಂತ ಫೇಸ್ ರಿಕಗ್ನಿಷನ್ ಕಡ್ಡಾಯವಲ್ಲ. ಪಿನ್ ಆಯ್ಕೆಯನ್ನೂ ಇಟ್ಟುಕೊಳ್ಳಬಹುದು. 2ರಲ್ಲಿ ಒಂದು ಆಯ್ಕೆ ಬಳಸಿಕೊಳ್ಳಬಹುದು ಎಂದು ಮೂಲಗಳು ಹೇಳಿವೆ.ಪ್ರಸ್ತುತ ಯುಪಿಐ ಮುಖಾಂತರ ಪಾವತಿ ಮಾಡುವ ಮೊದಲು ಹಣದ ಮೊತ್ತವನ್ನು ನಮೂದಿಸಿ, 4 ಅಥವಾ 6 ಅಂಕಿಯ ಪಿನ್ ನಂಬರ್ ಬಳಸಬೇಕಾಗುತ್ತದೆ. ಇದು ಸರಿಹೋದಲ್ಲಿ ಮಾತ್ರ ಪಾವತಿಯಾಗುತ್ತದೆ.
ಚಿಂತನೆಯಲ್ಲಿರುವ ಹೊಸ ಬದಲಾವಣೆಯಲ್ಲಿ ಬಳಕೆ ದಾರರು ತಮ್ಮ ಫಿಂಗರ್‌ಪ್ರಿಂಟ್ ಸೆನ್ಸರ್ ಮೂಲಕ ಬೆರಳಿನ ಮುದ್ರೆ ಮತ್ತು ಎದುರಿನ ಕ್ಯಾಮೆರಾ ಮೂಲಕ ಮುಖಚಹರೆಯನ್ನು ಯುಪಿಐನಲ್ಲಿ ದಾಖಲಿಸಬೇಕಾಗುತ್ತದೆ. ಪಾವತಿ ವೇಳೆ ಮೊತ್ತವನ್ನು ನಮೂದಿಸಿ ಪಿನ್ ಸಂಖ್ಯೆ ಒತ್ತುವ ಜಾಗದಲ್ಲಿ ಫಿಂಗರ್‌ಪ್ರಿಂಟ್ ಬಳಸಿದರೆ ಸೆನ್ಸರ್ ಮೂಲಕ ಕೈ ಬೆರಳಿನ ಮುದ್ರೆ ಒತ್ತಬೇಕಾಗುತ್ತದೆ. ಫೇಸ್ ರೆಕಗ್ನಿಷನ್ ಆಯ್ಕೆ ಮಾಡಿಕೊಂಡರೆ ಕ್ಯಾಮೆರಾ ಆನ್ ಆಗಲಿದ್ದು, ಅಲ್ಲಿ ನಿಮ್ಮ ಮುಖ ಸರಿಹೊಂದಿದರೆ ಪಾವತಿಯು ನಡೆಯುತ್ತದೆ.
ಈ ರೀತಿಯದ್ದು ಪ್ರಸ್ತುತ ಎಲ್ಲಾ ಸ್ಮಾರ್ಟ್‌ಫೋನ್ ಮಾದರಿಗಳಲ್ಲಿಯೂ ಲಾಕ್ ವ್ಯವಸ್ಥೆಯಲ್ಲಿ ಲಭ್ಯವಿದೆ.