ಕೇರಳ : “ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಯೋಜಿತವಾಗಿ ನಡೆಸಿದ ಹೇಯ ಕೃತ್ಯ. ನಮ್ಮ ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ. ಕೇರಳದ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ ಕೃತ್ಯವನ್ನು ನಿರೀಕ್ಷೆ ಮಾಡಿರಲಿಲ್ಲ. ಹುತಾತ್ಮ ಯುವ ಕಾರ್ಯಕರ್ತರ ಕುಟುಂಬಕ್ಕೆ ಕೆಪಿಸಿಸಿ ವತಿಯಿಂದ ₹25 ಲಕ್ಷ ಪರಿಹಾರ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೇರಳದ ಕಾಸರಗೋಡಿನಲ್ಲಿ ಸೋಮವಾರ ನಡೆದ 6ನೇ ಹುತಾತ್ಮರ ದಿನಾಚರಣೆ ಹಾಗೂ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಯುವ ಕಾಂಗ್ರೆಸ್ಸಿನ ನಾಯಕರಾದ ಶರತ್ ಲಾಲ್ ಕೃಪೇಶ್ ಅವರು ಪಕ್ಷಕ್ಕಾಗಿ ತಮ್ಮ ಜೀವವನ್ನೇ ಕೊಟ್ಟಿದ್ದಾರೆ. ಅವರು ನಮ್ಮ ನಡುವೆ ಜೀವಂತವಾಗಿ ಇಲ್ಲದೇ ಇರಬಹುದು ಆದರೆ ಅವರ ಆಲೋಚನೆ, ಚಿಂತನೆಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ, ಹುತಾತ್ಮರಾಗಿದ್ದಾರೆ” ಎಂದು ಹೇಳಿದರು.
“ನಾನು ಈ ಇಬ್ಬರು ಗೆಳೆಯರ ಸಾವಿನಿಂದ ಅವರ ಕುಟುಂಬಕ್ಕೆ, ಗೆಳೆಯರಿಗೆ, ಪಕ್ಷಕ್ಕೆ ಆಗಿರುವ ನಷ್ಟದ ಅರಿವಿದೆ. ನಾನು ನಮ್ಮ ಎಲ್ಲಾ ನಾಯಕರ ಪರವಾಗಿ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರ, ನಾಯಕರ ಜೊತೆ ಸದಾ ಜೊತೆಯಲ್ಲಿ ಇರುತ್ತೇವೆ ಎಂದು ಸಂದೇಶ ನೀಡಲು ಬಂದಿದ್ದೇನೆ” ಎಂದು ತಿಳಿಸಿದರು.
“ಯಾರೂ ಸಹ ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ನಿಜ ಹೊರಗೆ ಬರಲೇಬೇಕು. ನಾವು ನಮ್ಮ ಯುವ ನಾಯಕರನ್ನು ಕಳೆದುಕೊಂಡಿದ್ದೇವೆ. ಆದರೆ ನ್ಯಾಯಾಂಗದ ಮೂಲಕ ಅವರ ಸಾವಿಗೆ ನ್ಯಾಯ ದೊರಕಿದೆ. ಕೊಲೆ ಮಾಡಿದರ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಚ್ಛಿಸುವುದಿಲ್ಲ. ಏಕೆಂದರೆ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ. ನಾನು ನಮ್ಮ ಯುವ ನಾಯಕರ ಸಾವಿಗೆ ನ್ಯಾಯ ದೊರಕಿಸಿಕೊಟ್ಟ ನ್ಯಾಯಾಲಯಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದರು.
“ಈ ಹುತಾತ್ಮ ಕಾರ್ಯಕರ್ತರ ಕುಟುಂಬದವರನ್ನು ನಾನು ಕಾರ್ಯಕ್ರಮಕ್ಕೆ ಮೊದಲು ಭೇಟಿಯಾದೆ. ನಾನು ಈ ತಂದೆ- ತಾಯಂದಿರ ಬಳಿ ಕ್ಷಮೆ ಕೇಳಿದೆ. ಇವರುಗಳು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಕೊಡುಗೆ ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ. ಪ್ರೀತಿ ತುಂಬಿದ ಹೃದಯಗಳನ್ನು ಹೊತ್ತು ನಾವು ಹುತಾತ್ಮ ಗೆಳೆಯರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ” ಎಂದರು.
“ನೆಹರು ಅವರ ಕುಟುಂಬ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟಿದೆ. ಇಂದಿರಾಗಾಂಧಿ ಅವರು, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನಿ ಸ್ಥಾನವನ್ನೇ ತ್ಯಾಗ ಮಾಡಿದರು. ರಾಹುಲ್ ಗಾಂಧಿ ಅವರನ್ನು ಎರಡು ಬಾರಿ ಎಂಪಿ ಮಾಡಿದ್ದೀರಿ” ಎಂದು ಹೇಳಿದರು.
“ನಾನು ಈ ಕಾರ್ಯಕ್ರಮಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ ಬದಲಾಗಿ ಯುವ ಕಾಂಗ್ರೆಸ್ಸಿನಿಂದ ಬೆಳೆದವರಲ್ಲಿ ನಾನೂ ಒಬ್ಬ ಎಂದು ಬಂದಿದ್ದೇನೆ. ನಾನು ವಿದ್ಯಾರ್ಥಿ ಮತ್ತು ಯುವ ಕಾಂಗ್ರೆಸ್ ನಾಯಕನಾಗಿ ಬೆಳೆಯುವ ಕಾಲದಿಂದಲೂ ನೆಹರು- ಗಾಂಧಿ ಅವರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ನಿಷ್ಠನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ” ಎಂದರು.
“ಕೆ.ಸಿ.ವೇಣುಗೋಪಾಲ್ ಅವರು ನನ್ನ ಕೆಲಸಗಳನ್ನು ನೋಡಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇರಳದಲ್ಲಿ ರಾಜಕೀಯ ವಿರೋಧಿಗಳಿಂದ ಕೊಲೆಯಾಗಿದ್ದಾರೆ. ನೀವು ಯುವ ಕಾಂಗ್ರೆಸ್ ನಿಂದ ಬೆಳೆದವರಾಗಿ ಅಲ್ಲಿಗೆ ಹೋಗಿ ಶಕ್ತಿ ತುಂಬಬೇಕು ಎಂದು ಹೇಳಿದ್ದರು. ನಿಮಗೆ ಬೆಂಬಲವಾಗಿ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ತಿಳಿಸಿದರು.
“ನಾನು ಕೊನೆಯ ವರ್ಷದ ಪದವಿ ಓದುವ ವೇಳೆಗೆ ರಾಜೀವ್ ಗಾಂಧಿ ಅವರು ನನ್ನ ಗುರುತಿಸಿ ವಿಧಾನಸಭೆ ಟಿಕೆಟ್ ನೀಡಿದರು. ಅದೇ ರೀತಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಎಂದಿಗೂ ನಾವು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಸಂಕಷ್ಟದ ಕಾಲದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿಕೊಟ್ಟಿದ್ದೀರಿ” ಎಂದರು.
“ಕೇರಳ ಮೂಲದ ಅನೇಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅನೇಕರ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಿಂದೆ ಕೇರಳದಲ್ಲಿ ಕ್ರಿಮಿನಲ್ ರಹಿತ ಸರ್ಕಾರ ನೀಡಿದೆ. ಇದೇ ರೀತಿಯ ಆಡಳಿತ ನೀಡಿ ದೇಶಕ್ಕೆ ಮಾದರಿಯಾಗಬೇಕು” ಎಂದರು.
ಸಿಪಿಎಂ- ಬಿಜೆಪಿ ಒಳ ಒಪ್ಪಂದ
“ಸಿಪಿಎಂ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಇದು ಯಾವುದೇ ಕಾರಣಕ್ಕು ಕೇರಳದ ಬೆಳವಣಿಗೆಗೆ ಪೂರಕವಾದ ರಾಜಕಾರವಲ್ಲ. ಈಗಿನ ಸರ್ಕಾರ ತನ್ನ ಜನರನ್ನು ಸಂತೋಷವಾಗಿ ಇಡಲು ವಿಫಲವಾಗಿದೆ” ಎಂದರು.
BREAKING: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಇಬ್ಬರು ದುರ್ಮರಣ, ಮೂವರಿಗೆ ಗಂಭೀರ ಗಾಯ
ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ: ‘AI ತಂತ್ರಜ್ಞಾನ’ ಬಳಕೆ – ವರದಿ