ಯಾದಗಿರಿ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರೆಂಟಿ ಯೋಜನೆಗಳು ರದ್ದಾಗಲಿವೆ ಎಂದು ಕೈ ಶಾಸಕ ಬಾಲಕೃಷ್ಣ ಹೇಳಿಕೆ ಸಂಚಲನ ಮೂಡಿಸಿತ್ತು. ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಸೋತರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಮಾತ್ರವೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಮುಂದಾಲೋಚನೆ ಇಲ್ಲದೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದರು. ಅವುಗಳ ಅನುಷ್ಠಾನ ಮಾಡಿ 8 ತಿಂಗಳಿಗೆ ಹಲವು ಸಮಸ್ಯೆ ಉಂಟಾಗಿದೆ. 100 ಪ್ರತಿಶತ ಗ್ಯಾರಂಟಿಗಳ ಅನುಷ್ಠಾನ ಮಾಡಿಲ್ಲ. ಅನುದಾನಗಳನ್ನು ಕೊಡದೇ ಮೋಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ನಿಮ್ಮ ಗುಲಾಮರಾಗಿ ಕೆಲಸ ಮಾಡ್ತೀವಿ ಎಂದು ಮತ ಪಡೆದು ಇಂದು ಜನರನ್ನೇ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ಅವರ ತೆರಿಗೆ ಹಣದಲ್ಲೇ ಗ್ಯಾರಂಟಿ ಕೊಟ್ಟು, ಈಗ ಚುನಾವಣೆ ಗೆಲ್ಲದಿದ್ದರೆ ನಿಲ್ಲಿಸುತ್ತೇವೆ ಎನ್ನುವುದು ಮೋಸ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಕದ್ದು ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಇಟ್ಟಿದ್ದ ಹಣದಲ್ಲಿ 11 ಸಾವಿರ ಕೋಟಿಯನ್ನು ತೆಗೆದು ಗ್ಯಾರಂಟಿ ಯೋಜನೆಗೆ ಬಳಸಲಾಗಿದೆ. ಉಚಿತ ವಿದ್ಯುತ್ ಕೊಡ್ತೇವೆ ಎಂದು ರೈತರಿಗೆ ನೀಡುತ್ತಿದ್ದ ವಿದ್ಯುತ್ ಕಡಿಮೆ ಮಾಡಲಾಗಿದೆ ಎಂದರು.
ಮಂಡ್ಯದಲ್ಲಿ ಒಂದು ಬಾವುಟದ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡ ಹೋರಾಟ ಮಾಡಲಾಗುತ್ತಿದೆ. ಆದರೆ, ಮೇಕೆದಾಟು ಯೋಜನೆ ಆಗಿಲ್ಲ, ಸರಿಯಾದ ನೀರಾವರಿ ಸೌಲಭ್ಯ ಒದಗಿಸಿಲ್ಲ, ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ, ಕಬ್ಬು ಬೆಳೆಗಾರರಿಗೆ ಹಣ ಸಿಗ್ತಿಲ್ಲ, ಕೇಂದ್ರ ಸರ್ಕಾರ ಶ್ರೀಮಂತರ 11 ಲಕ್ಷ ಕೋಟಿ ರೂಪಾಯಿ ಸಾಲ ರೈಟ್ ಆಫ್ ಮಾಡಿದೆ, ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡದೇ ಬಾವುಟದ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತಿರುವುದು ದುರದೃಷ್ಟಕರ ಎಂದರು.