ಬೆಂಗಳೂರು : ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡಿದ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಬಂದರೆ ವಿಶೇಷವಾಗಿ ಮುಸ್ಲಿಮರನ್ನು ಓಲೈಕೆ ಮಾಡುತ್ತಾರೆ. ಟಿಪ್ಪು ಸುಲ್ತಾನ್ ಜಯಂತಿಗೆ ಆದೇಶ ಹೊರಡಿಸಿದ್ದರು.ಅವರೇನು ಕೇಳಿದ್ರಾ ಜಯಂತಿ ಮಾಡಿ ಅಂತ? ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಕಾಂಗ್ರೆಸಿಗರು ಎಲ್ಲಾ ಆಸ್ತಿಯನ್ನ ವಕ್ಫ್ ಬೋರ್ಡ್ ಗೆ ಬರೆಯುತ್ತಾರೆ. ಅವನ್ಯಾರೋ ಪಾರ್ಲಿಮೆಂಟ್ ನಮ್ಮದೇ ಅಂತ ಹೇಳಿದ್ದಾನೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧಾನಸೌಧ, ಲೋಕಸಭೆ ಅವರದ್ದೇ. ಎಲ್ಲಾ ಆಸ್ತಿಗಳು ಮುಸ್ಲಿಮರದಂತೆ ಏನು ಅರಬ್ ನವರು ಕೊಟ್ರಾ? ಕಾಂಗ್ರೆಸ್ ಪಕ್ಷಕ್ಕೆ ಎಂತಹ ಹೀನಾಯ ಪರಿಸ್ಥಿತಿ ಬಂದಿದೆ ಅಂದರೆ ಮಾತು ಎತ್ತಿದರೆ ಎಲ್ಲವನ್ನೂ ಎಸ್ಐಟಿ ಎಸ್ಐಟಿ ಎನ್ನುತ್ತಾರೆ.
ಈಗ ತಹಶೀಲ್ದಾರ್ ತಪ್ಪು ಆಗಿದ್ದು ಬಿಜೆಪಿ ಕಾಲದಲ್ಲಿ ಅಂತ ಹೇಳುತ್ತಿದ್ದಾರೆ. ಕಾಲ ಯಾವುದು ಅನ್ನೋದಲ್ಲ ತಪ್ಪು ಏನಾಗಿದೆ ಅನ್ನೋದು ಮುಖ್ಯ.ಯಾರ ಕಾಲದಲ್ಲಿ ಆಗಲಿ ತಪ್ಪು ಸರಿಪಡಿಸಬೇಕು. ಕಾಂಗ್ರೆಸ್ನವರು ಎಲ್ಲವನ್ನು ಅಲ್ಪಸಂಖ್ಯಾತರಿಗೆ ಬರೆದು ಕೊಡುತ್ತಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯ ಪ್ರವೃತ್ತಿ ಬಿಡಬೇಕು.
ಈ ಒಂದು ಘಟನೆಯಿಂದ ಮುಂದೆ ಆಗುವ ಅನಾಹುತಕ್ಕೆ ಕಾಂಗ್ರೆಸ್ ನೇರ ಕಾರಣವಾಗಲಿದೆ. ರೈತರು ದಂಗೆ ಎದ್ದರೆ ಕಾಂಗ್ರೆಸ್ ಸರ್ವನಾಶ ಆಗಲಿದೆ. ತಹಶೀಲ್ದಾರ್ ತಪ್ಪು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆರ್ ಅಶೋಕ್ ಆಗ್ರಹಿಸಿದರು.7