ಬೆಂಗಳೂರು : ಲೋಕಸಭೆಯ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ನಿರೀಕ್ಷೆಯಂತೆ ಈ ಬಾರಿ ಏನ್ಡಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ ಅದರಂತೆ ಇಂಡಿಯಾ ಮೈತ್ರಿ ಕೂಟ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ನಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಿಂದ ಗೆದ್ದಂತಹ ಬಿಜೆಪಿ ಇರಬಹುದು ಜೆಡಿಎಸ್ ಇರಬಹುದು ಅಥವಾ ಕಾಂಗ್ರೆಸ್ನವರು ಎಲ್ಲಾ ಸಂಸತ್ ಸದಸ್ಯರಿಗೆ ಅಭಿನಂದನೆ ಹೇಳಲಿಕ್ಕೆ ಬಯಸುತ್ತೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಏನು ನಿರೀಕ್ಷೆ ಮಾಡಿತ್ತೋ ಆ ನಿರೀಕ್ಷೆಗೆ ಅನುಗುಣವಾಗಿ 10 ಸ್ಥಾನಗಳನ್ನು ಗೆಲ್ಲಿಕೆ ಸಾಧ್ಯವಾಗಿದೆ. ನಾವು ಸುಮಾರು ಹದಿನೈದರಿಂದ ಇಪ್ಪತ್ತು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಲೆಕ್ಕಾಚಾರ ಹಾಕಲಾಗಿತ್ತು.ಆದರೆ ನಮ್ಮ ಲೆಕ್ಕಚಾರದಂತೆ ಅದು ಆಗಲಿಲ್ಲ. ಆದರೆ 2019ರಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದೆವು ಈ ಬಾರಿ 9 ಸ್ಥಾನಗಳನ್ನು ಗೆದ್ದಿದ್ದೇವೆ ಎಂದರು.
ರಾಜ್ಯಕ್ಕೆ ಸೀಮಿತವಾದಂತೆ ಈ ಬಾರಿ ನಮಗೆ 45.34% ಮತದಾನವಾಗಿದೆ. ಅದೇ ರೀತಿ ಬಿಜೆಪಿಗೆ 46.04% ಮತ ಬಂದಿದೆ. ಎರಡು ಪಕ್ಷಗಳ ನಡುವೆ ಕೇವಲ ಒಂದು ಪರ್ಸೆಂಟ್ ಅಷ್ಟೇ ವ್ಯತ್ಯಾಸ ಕಂಡು ಬಂದಿದೆ. ಅದೇ 2019 ರಲ್ಲಿ ಬಿಜೆಪಿಗೆ 51.38% ಮತ ಬಂದಿದ್ದವು. ನಮಗೆ 31.88% ಬಂದಿತ್ತು. 2019 ಕಿಂತಾ ನಮ್ಮ ಮತದಾನದ ಪ್ರಮಾಣ ಹೆಚ್ಚು ಮಾಡಿಕೊಂಡಿದ್ದೇವೆ. ನಮ್ಮ ವೋಟಿಂಗ್ ಶೇರ್ ಹೆಚ್ಚಾಗಿದೆ. ಅವರು 58 ರಿಂದ 46ಕ್ಕೆ ಬಂದಿದ್ದಾರೆ ಅದು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಈ ಒಂದು ಪರ್ಸೆಂಟೇಜ್ ಪಡೆದಿದ್ದಾರೆ. ಜೆಡಿಎಸ್ 5.72 ಪರ್ಸೆಂಟೇಜ್ ಪಡೆದುಕೊಂಡಿದ್ದಾರೆ. ಕಳೆದ ಬಾರಿ 9.67% ಜೆಡಿಎಸ್ ಪಡೆದುಕೊಂಡಿದ್ದರು. ಕಳೆದ ಬಾರಿ ಮತ್ತು ಈ ಬಾರಿ ನೋಡಿದರೆ ಜೆಡಿಎಸ್ಗೆ ಕಡಿಮೆ ಬಂದಿದೆ.
ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಗೆಲ್ಲಲು ಆಗಲಿಲ್ಲ. ಪರ್ಸೆಂಟೇಜ್ ಹೆಚ್ಚಿಗೆಯಾಗಿದೆ ಎಂದು ಹಿಗ್ಗೋಕೆ ಆಗಲ್ಲ. ದೇಶದಲ್ಲಿ ಕೂಡ ಕಾಂಗ್ರೆಸ್ನ ವೋಟಿನ ಪ್ರಮಾಣ 3% ಹೆಚ್ಚಳವಾಗಿದೆ. ಭಾರತೀಯ ಜನತಾ ಪಕ್ಷದವರು ಅಧಿಕಾರದಲ್ಲಿದ್ದರು. ಮತ್ತೆ ಎಲ್ಲರೂ ಕೂಡ ಮೋದಿಯವರ ಮುಖ ನೋಡಿ ವೋಟ್ ಕೊಡಿ ಅಂತ ಕೇಳುತ್ತಿದ್ದರು. 2019 ರಲ್ಲಿ 303 ಸ್ಥಾನಗಳಲ್ಲಿ ಗೆದ್ದಿದ್ದರು. 2014ರಲ್ಲಿ 284 ಸ್ಥಾನಗಳನ್ನು ಗೆದ್ದಿದ್ದರೆ, ಈ ಬಾರಿ 240 ಸ್ಥಾನಗಳನ್ನು ಗೆದ್ದಿದ್ದಾರೆ ಎಂದರು.