ಬೆಂಗಳೂರು: ಯುಪಿಎ ಸರಕಾರವು ಗ್ರಾಮೀಣ ಜನರ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮನರೇಗಾ) ಹಿಂದಿನಂತೆಯೇ ಯಥಾವತ್ತಾಗಿ ಮುಂದುವರಿಸಬೇಕು. ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷವು ಇದಕ್ಕಾಗಿ ಸದನದ ಒಳಗೂ ಹೊರಗೂ ಹೋರಾಡಲಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಯೋಜನೆಯ ಹೆಸರನ್ನು ಕೇಂದ್ರ ಸರಕಾರವು ವಿಬಿ-ಜಿ ರಾಮ್ ಜಿ ಎಂದು ಬದಲಿಸಿರುವುದನ್ನು ವಿರೋಧಿಸಿ ಮತ್ತು ಯೋಜನೆಯ ಸ್ವರೂಪದಲ್ಲಿ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ರಾಜಭಚನ ಚಲೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಒತ್ತಾಸೆಯಿಂದ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯಕ್ಕೆ ತಕ್ಕಂತೆ ಮನರೇಗಾ ಯೋಜನೆಯನ್ನು ರೂಪಿಸಲಾಗಿತ್ತು. ಈಗ ಮೋದಿ ಸರಕಾರ ಇಂತಹ ಯೋಜನೆಯನ್ನೇ ಹಾಳು ಮಾಡಿದೆ ಎಂದು ಅವರು ಟೀಕಿಸಿದರು.
ಇದು ಕೇಂದ್ರ ಸರಕಾರಿ ಪ್ರಾಯೋಜಿತ ಯೋಜನೆ ಎಂದು ಮೋದಿ ಹೇಳುತ್ತಿದ್ದಾರೆ. ಇದು ಈವರೆಗೂ ಹಾಗೆ ಇತ್ತು. ಈಗ ರಾಜ್ಯ ಸರಕಾರಗಳು ಇದಕ್ಕೆ ಶೇಕಡ 40ರಷ್ಟು ಹಣ ಕೊಡಬೇಕಾಗಿದೆ. ಒಂದು ಪಕ್ಷ ಕೊಟ್ಟರೂ ಇದರಿಂದ ನಮಗಾಗುವ ಲಾಭವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿ ಸರಕಾರವು ತನಗೆ ಬೇಕಾದ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಮನರೇಗಾ ಯೋಜನೆಯನ್ನು ಸೀಮಿತಗೊಳಿಸಿದೆ. ಜೊತೆಗೆ ಅದು ಈಗ ಬದಲಾವಣೆಯ ಹೆಸರಿನಲ್ಲಿ ಗುತ್ತಿಗೆದಾರರಿಗೆ ಮಣೆ ಹಾಕಿದೆ. ಇದರಿಂದ ಗ್ರಾಮೀಣ ಭಾಗಗಳ ಜನರ ಉದ್ಯೋಗ ಖಾತ್ರಿಗೆ ಕುತ್ತು ಬಂದಿದೆ ಎಂದು ಅವರು ಹೇಳಿದ್ದಾರೆ.
ಪರಿಷ್ಕೃತ ಯೋಜನೆಗೆ ಬಿಜೆಪಿ ಬೇಕೆಂದೇ ರಾಮನ ಹೆಸರನ್ನು ಇಟ್ಟಿದೆ. ಈ ಮೂಲಕ ಅದು ಜನರಿಗೆ ಮೋಸ ಮಾಡುತ್ತಿದೆ. ಹೀಗಾಗಿಯೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.
‘ಆಹಾರ ಆರ್ಡರ್’ ಜೊತೆಗಿತ್ತು ‘ಕೈಬರಹದ ಟಿಪ್ಪಣಿ’, ನೋಡಿ ಬೆರಗಾದ ಗ್ರಾಹಕರು: ಬರೆದಿದ್ದೇನು ಗೊತ್ತಾ?
ರಾಜ್ಯದ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ‘ಮಹಾತ್ಮ ಗಾಂಧಿ’ ಹೆಸರಿಡಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ








