ಮಂಗಳೂರು: ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ದ ಬಿಜೆಪಿ ನಾಯಕರು ಮಾಡಿರುವ ಭ್ರಷ್ಟಾಚಾರದ ಆರೋಪ ಸತ್ಯಕ್ಕೆ ದೂರವಾದುದು. ರಾಜಕೀಯ ದುರುದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದ್ದು, ಇದರಿಂದ ಸದನ ಹಕ್ಕುಚ್ಯುತಿ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಐವನ್ ಡಿಸೋಜಾ, ಯು.ಟಿ.ಖಾದರ್ ಅವರು ಶಾಸನ ಸಭೆಯ ಅತ್ಯನ್ನತ ಹುದ್ದೆಯಾಗಿರುವ ವಿಧಾನಸಭಾಧ್ಯಕ್ಷರಾಗಿದ್ದಾರೆ. ಆ ಸ್ಥಾನದಲ್ಲಿರುವವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಸಂದರ್ಭದಲ್ಲಿ ಶಾಸನಾತ್ಮಕ ಪ್ರಕ್ರಿಯೆಗಳನ್ನು ಅನುಸಬೇಕಾಗುತ್ತದೆ. ಅದನ್ನು ಹೊರತಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಾಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಹಾಲಿ ಸ್ಪೀಕರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದರು. ಇದು ಸದನವನ್ನು ನಿಂದಿಸಿದ ಹಾಗೂ ಹಕ್ಕುಚ್ಯುತಿಯ ನಡೆಯಾಗಿರುವುದರಿಂದ ಅವರ ವಿರುದ್ದ ಹಕ್ಕುಚ್ಯುತಿ ದೂರನ್ನು ನೀಡಲಾಗುವುದು ಎಂದು ಐವನ್ ಡಿಸೋಜಾ ತಿಳಿಸಿದರು.
ಯು.ಟಿ.ಖಾದರ್ ರವರು ವಿಧಾನಸಭಾ ಸಚಿವಾಲಯದ ಮುಖ್ಯಸ್ಥರಾಗಿದ್ದು, ಅವರು ಯಾವುದೇ ಪಕ್ಷದ ಪ್ರತಿನಿಧಿಯಾಗಿರುವುದಿಲ್ಲ. ಎಲ್ಲಾ ಪಕ್ಷಗಳ ಶಾಸಕರ ವಿಚಾರದಲ್ಲೂ ಸಮಾನ ತೀರ್ಮಾನ ಕೈಗೊಳ್ಳುವವರು. ಆದಾಗಿಯೂ ಶಾಸಕರ ನಿವಾಸಗಳ ಕೆಲಸಗಳ ಟೆಂಡರ್ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಒಂದು ವೇಳೆ ಅಕ್ರಮಗಳು ನಡೆದಿದ್ದೇ ಆಗಿದ್ದಲ್ಲಿ ಆರಂಭದಲ್ಲೇ ಈ ಶಾಸಕರು ಆಕ್ಷೇಪಿಸಬಹುದಿತ್ತು. ಆದರೆ ರಾಜಕೀಯ ದುರುದ್ದೇಶದ ಹಿನ್ನೆಲೆಯಲ್ಲಿ ಈ ರೀತಿ ಅನಗತ್ಯ ಆರೋಪಗಳನ್ನು ಮಾಡಲಾಗಿದೆ ಎಂದು ಐವಾನ್ ತಿರುಗೇಟು ನೀಡಿದರು.
ಸದನದ ನಿಯಮಾವಳಿ ಪ್ರಕಾರ, ಸಭಾಧ್ಯಕ್ಷರ ವಿರುದ್ದ ಆರೋಪ ಮಾಡುವ ಮೊದಲು ಆಂತರಿಕ ತನಿಖೆಯಲ್ಲಿ ಅದು ದೃಢಪಡಬೇಕು. ಕಾನೂನು ಪ್ರಕಾರ ಮಾಹಿತಿ ಸಂಗ್ರಹಿಸದ ಹೊರತು ಆರೋಪ ಮಾಡಿದಲ್ಲಿ ಅದರಿಂದ ಸದನದ ಘನತೆಗೆ ಕುಂದುಂಟಾಗುತ್ತದೆ. ಸೂಕ್ತ ದಾಖಲೆಗಳನ್ನು ಸಂಗ್ರಹಿಸದೇ, ಕೇವಲ ಊಹೆಗೆ ತಕ್ಕಂತೆ ಮಾತನಾಡುವುದು ಬಿಜೆಪಿಯವರ ನಡೆಯಾಗಿದ್ದು, ಅದೇ ರೀತಿಯಲ್ಲಿ ಕಾಗೇರಿ ಹಾಗೂ ಭರತ್ ಶೆಟ್ಟಿ ಅವರು ಸ್ಪೀಕರ್ ಯು.ಟಿ.ಖಾದರ್ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಐವನ್ ಡಿಸೋಜಾ ದೂರಿದರು.
‘M.N.Kaul and S.L.Shakdher ನಿಯಮ’ ಏನು ಹೇಳುತ್ತದೆ?
ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಶಾಸನಸಭೆಯ ಮತ್ತು ಸಂಸದೀಯ ನಡವಳಿಕೆ- ಕಾರ್ಯವಿಧಾನಗಳ ಬಗ್ಗೆ ‘M.N.Kaul and S.L.Shakdher ನಿಯಮ’ದಲ್ಲಿ ಉಲ್ಲೇಖವಿದೆ. ಸ್ಪೀಕರ್ ಸ್ಥಾನಮನ, ಅದರ ಘನತೆ ಮತ್ತು ಹಕ್ಕುಚ್ಯುತಿ ಬಗ್ಗೆ ಸೂಚ್ಯವಾಗಿ ಹೇಳಲಾಗಿದೆ. ಆ ನಿಯಮಗಳು ಶಾಸನಸಭೆಯ ಸದಸ್ಯರಾಗಿರುವ ಭರತ್ ಶೆಟ್ಟಿ ಸಹಿತ ಬಿಜೆಪಿ ಶಾಸಕರಿಗೂ ತಿಳಿದಿರುತ್ತದೆ. ಆ ಸಂಸದೀಯ ನಿಯಮಗಳ ಪ್ರಕಾರ ಭರತ್ ಶೆಟ್ಟಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡವಳಿಕೆಯು ಆಕ್ಷೇಪಾರ್ಹ. ಅವರ ನಡೆಯಿಂದ ಸ್ಪೀಕರ್ ಅವರನ್ನು ನಿಂದಿಸಿದಂತಾಗಿದೆ. ಸ್ಪಷ್ಟವಾಗಿ ಸದನದ ಹಕ್ಕುಚ್ಯುತಿ ಆಗಿದೆ ಎಂದು ಐವನ್ ಡಿಸೋಜಾ ಬೊಟ್ಟುಮಾಡಿದರು.
ಯು.ಟಿ.ಖಾದರ್ ಅವರು ಈ ಹಿಂದಿನ ಸ್ಪೀಕರ್ಸ್ ಅನುಸರಿಸಿರುವ ನಿಯಮಗಳನ್ನೇ ಪಾಲಿಸಿದ್ದಾರೆ. ಎಲ್ಲಾ ಕಾಮಗಾರಿಗಳನ್ನೂ ಸರ್ಕಾರದ ಅಧೀನದ ಸಂಸ್ಥೆಗಳ ಮೂಲಕವೇ ನಡೆಸಲಾಗಿದೆ. ಹೀಗಿರುವಾಗ ಟೆಂಡರ್ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದ ಐವನ್ ಡಿಸೋಜಾ , ಒಂದು ವೇಳೆ ಆರೋಪ ಮಾಡಲೇಬೇಕೆಂದಿದ್ದಲ್ಲಿ, ಮೊದಲು ದೂರು ನೀಡಬಹುದಿತ್ತು, ಸದನದಲ್ಲಿ ಚರ್ಚಿಸಬಹುದಿತ್ತು. ತನಿಖೆಗೆ ಒತ್ತಾಯಿಸಬಹುದಿತ್ತು. ಈ ಪ್ರಯತ್ನಗಳೆಲ್ಲವೂ ವಿಫಲವಾದ ನಂತರದಲ್ಲಿ ಮಾತ್ರ ಸಾರ್ವಜನಿಕವಾಗಿ ಆರೋಪ ಮಾಡಬಹುದಿತ್ತು. ಅದರ ಹೊರತಾಗಿ, ಬಿಜೆಪಿ ನಾಯಕರು ಸ್ಪೀಕರರನ್ನು ಗುರಿಯಾಗಿಸುವ ಉದ್ದೇಶದಿಂದಲೇ ಈ ರೀತಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿದರು.
ಈ ರೀತಿಯ ಸುಳ್ಳು ಆರೋಪಗಳಿಂದಾಗಿ ಸದನದ ಗೌರವಕ್ಕೂ ಚ್ಯುತಿ ಆಗಿದೆ, ಸ್ಪೀಕರ್ ಸ್ಥಾನಕ್ಕೂ ಬಿಜೆಪಿ ನಾಯಕರು ಕುಂದುಂಟು ಮಾಡಿದ್ದಾರೆ. ಹಾಗಾಗಿ ಹಕ್ಕುಚ್ಯುತಿಯ ದೂರನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!
ಟನಲ್ ರಸ್ತೆ ಯೋಜನೆ ಬಗ್ಗೆ ಟೀಕೆ ಬಿಟ್ಟು ಬಿಜೆಪಿ ನಾಯಕರು ಸಲಹೆ ನೀಡಲಿ: ಡಿಸಿಎಂ ಡಿ.ಕೆ.ಶಿವಕುಮಾರ್








