ಸೂರತ್(ಗುಜರಾತ್): ಕಾಂಗ್ರೆಸ್ ಶಾಸಕ ಹಾಗೂ ಬುಡಕಟ್ಟು ಸಮುದಾಯದ ಮುಖಂಡ ಅನಂತ್ ಪಟೇಲ್ ಮೇಲೆ ಹಲ್ಲೆ ನಡೆಸಲಾಗಿದ್ದು, ಇದನ್ನು ಖಂಡಿಸಿ ಅವರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಗುಜರಾತ್ನಲ್ಲಿ ನಡೆದಿದೆ.
ಆಕ್ರೋಶಗೊಂಡ ಪ್ರತಿಭಟನಾಕಾರರು ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳ ವಾಹನವನ್ನೂ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ನಿನ್ನೆ ಕಾಂಗ್ರೆಸ್ ಶಾಸಕ, ಬುಡಕಟ್ಟು ಜನಾಂಗದ ಮುಖಂಡ ಅನಂತ್ ಪಟೇಲ್ ಎಂಬುವರ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ಕಾರಣ ಬಿಜೆಪಿಗರು ಎಂದು ಆರೋಪಿಸಲಾಗಿದ್ದು, ಹಲ್ಲೆಯಲ್ಲಿ ಶಾಸಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕ, ʻಜಿಲಾ ಪಂಚಾಯತ್ ಮುಖ್ಯಸ್ಥರು ಮತ್ತು ಅವರ ಗೂಂಡಾಗಳು ನನ್ನ ಕಾರನ್ನು ಧ್ವಂಸಗೊಳಿಸಿದರು. ನಾನು ಸಭೆಗಾಗಿ ಖೇರ್ಗಾಮ್ ತಲುಪುತ್ತಿದ್ದಾಗ ನನ್ನನ್ನು ಥಳಿಸಿದರು. ಆದಿವಾಸಿಗಳಾಗಿರುವ ನೀವು ಹೇಗೆ ನಾಯಕರಾಗುತ್ತಿರಿ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲʼ ಎಂದು ಹಲ್ಲೆ ನಡೆಸಿದರು ಎಂದಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಭದ್ರತೆ ಇಲ್ಲದಂತಾಗಿದೆ. ನನ್ನ ಮೇಲೆ ಹಲ್ಲೆ ನಡೆಸಿದ ಬಿಜೆಪಿಯ ಬೆಂಬಲಿಗರನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ. 14 ಜಿಲ್ಲೆಗಳ ಹೆದ್ದಾರಿಗಳನ್ನು ಆದಿವಾಸಿಗಳು ನಿರ್ಬಂಧಿಸಲಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರನ್ನು ಥಳಿಸಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.