ಬೆಂಗಳೂರು : ಅಧಿಕಾರದುದ್ದಕ್ಕೂ ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‌ನಂತೆ ದುರುಪಯೋಗ ಮಾಡಿಕೊಂಡು, ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಕ್ಷಮ ಏರ್ಪಡಿಸಿದ್ದ ಪಕ್ಷದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಬಯಸಿ ಯೋಜನೆ ಜಾರಿಗೊಳಿಸಿದ್ದಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ನಾವೂ ಸಾಗಬೇಕಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವಿನ ಸಂಕಲ್ಪ ಸಾಕಾರಗೊಳಿಸಲು ಶ್ರಮಿಸಬೇಕು. ಮೋದಿಯವರ ನಾಯಕತ್ವದ ಪಕ್ಷದಲ್ಲಿದ್ದೇವೆ ಎಂಬ ಹೆಮ್ಮೆ ನಮ್ಮದು ಎಂದರು.
ರಾಜ್ಯಾದ್ಯಂತ ಪ್ರವಾಸ: ಪಕ್ಷ ಬಲಪಡಿಸಲು ಶೀಘ್ರವೇ ದಿನಕ್ಕೆ ಎರಡು ಜಿಲ್ಲೆಗಳಂತೆ ರಾಜ್ಯ ಪ್ರವಾಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಸ್ಥಾನಗಳನ್ನು ಗೆದ್ದು, ಮೋದಿಯವರ ಕೈ ಬಲಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ದೃಷ್ಟಿಯಿಂದ ರಾಜ್ಯ ಪ್ರವಾಸದ ವೇಳೆ ಪ್ರಮುಖರ ಜತೆಗೆ ಮಾತನಾಡುವೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲ ತುಂಬಬೇಕು ಎಂದು ಬಿಎಸ್‌ವೈ ಮನವಿ ಮಾಡಿದರು.
ಎಸ್‌ಸಿ ಮೋರ್ಚಾ ನೂತನ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜು, ಸಂಸದ ಮುನಿಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಹೇಶ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕುಡಚಿ ರಾಜೀವ್ ಮತ್ತಿತರರು ಭಾಗವಹಿಸಿದ್ದರು.