ಬೆಂಗಳೂರು: ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮುಂದೆ ಮಾತಾಡುತ್ತಾರೆಯೇ ಹೊರತು ದಾಖಲೆಗಳನ್ನು ನೀಡಲ್ಲ. ಮಾಲೂರು ಕ್ಷೇತ್ರದಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಮೊದಲು ಮಾತಾಡಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಾಮನ್‌ಸೆನ್ಸ್ ಇಲ್ಲ. ಅವರ ಮಾತಿನಿಂದಲೇ ಅವರು ಇಡೀ ದೇಶದಲ್ಲಿ ಹೆಚ್ಚು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ಅದು ಸುಳ್ಳು ಎಂದು ಸಾಬೀತಾಗಿದೆ. ಈಗ ಅಳಂದ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಮಾಲೂರು ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂದು ಸಾಬೀತಾಗಿದ್ದು, ಕಾಂಗ್ರೆಸ್ ಶಾಸಕರ ಸದಸ್ಯತ್ವವೇ ರದ್ದಾಗಿದೆ. ಇಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಅಫಿಡವಿಟ್ ನೀಡಿದ್ದರು. ಜಿಲ್ಲಾಧಿಕಾರಿ ತಪ್ಪು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಬಿಹಾರದಲ್ಲಿ ಸೋಲುತ್ತೇವೆ ಎಂದು ತಿಳಿದಿರುವುದರಿಂದ ಕಾಂಗ್ರೆಸ್ ನಾಯಕರಿಗೆ ಭ್ರಮನಿರಸನವಾಗಿದೆ. ಅದಕ್ಕಾಗಿ ಮೊದಲೇ ಆರೋಪ ಮಾಡಿ ಕೇವಿಯಟ್ ರೀತಿಯಲ್ಲಿ ಮಾಡಿದ್ದಾರೆ. ಆದರೆ ಇವರು ಹಾಕುವ ಪಟಾಕಿಗಳು ಠುಸ್ ಆಗಿದೆ. ಚುನಾವಣಾ ಆಯೋಗದ 45 ದಿನ ಗಡುವು ನೀಡಿದೆ. ಆ ಸಮಯದಲ್ಲಿ ಇವರು ಮಣ್ಣು ತಿನ್ನುತ್ತಿದ್ದರು. ದಾಖಲೆ ಇದ್ದರೆ ಆಗಲೇ ಕೋರ್ಟ್‌ಗೆ ಹೋಗಬೇಕಿತ್ತು. ಇದಕ್ಕೆ ಕಾಂಗ್ರೆಸ್ ಪಕ್ಷ ಉತ್ತರ ನೀಡಲಿ ಎಂದರು.
ಹಿಟ್ ಆಂಡ್ ರನ್ ರೀತಿಯಲ್ಲಿ ಆರೋಪ ಮಾಡುವುದು ಕಾಂಗ್ರೆಸ್ ಜಾಯಮಾನ. ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲೇ ಈ ಬಗ್ಗೆ ಮಾತನಾಡಬೇಕಿತ್ತು. ದಾಖಲೆ ಇಲ್ಲವಾದಾಗ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಾರೆ. ಚುನಾವಣಾ ಆಯೋಗದ ಮುಂದೆ ಹೋಗಿ ದಾಖಲೆ ನೀಡಬೇಕಿತ್ತು. ಚುನಾವಣಾ ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸರಿಯಾಗಿ ಉಳಿದಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಯೇ ಪಾಪರ್ ಆಗಿದ್ದೇವೆಂದು ಹೇಳಿದ್ದಾರೆ. ತಮಿಳುನಾಡಲ್ಲೂ ಸಮೀಕರಣ ಬದಲಾಗಿದೆ. ಇಂಡಿ ಕೂಟ ಮುಳುಗುತ್ತಿರುವ ಹಡಗಾಗಿದೆ ಎಂದರು.
ಮುಸ್ಲಿಮ್ ಸಮುದಾಯದವರು ಅಕ್ರಮ ಮಾಡುತ್ತಿದ್ದಾರೆ. ಬಾಂಗ್ಲಾ ದೇಶದವರು ಇಲ್ಲಿಗೆ ಬಂದು ಮತದಾನ ಮಾಡುತ್ತಾರೆ. ಅಂಥವರಿಗೆ ವೋಟರ್ ಐಡಿ ನೀಡುವುದು ಯಾರು? ದೇಶದ ಭದ್ರತೆಯ ದೃಷ್ಟಿಯಿಂದ ಅಂಥವರನ್ನು ವಾಪಸ್ ಕಳಿಸಬೇಕು. ಆದರೆ ಕಾಂಗ್ರೆಸ್ ದೇಶದ ಭದ್ರತೆಗಿಂತ ಹೆಚ್ಚಾಗಿ ಮತಬ್ಯಾಂಕ್ ಮುಖ್ಯ. ಪಾಕಿಸ್ತಾನ, ಬಾಂಗ್ಲಾದವರು ಆ ದೇಶದಲ್ಲೂ ಮತ ಹಾಕಿ, ಇಲ್ಲೂ ಬಂದು ಮತ ಚಲಾಯಿಸುತ್ತಾರೆ. ಒಬ್ಬರಿಗೆ ಒಂದೇ ಓಟು ಎಂಬ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡುತ್ತಿದ್ದಾರೆ ಎಂದರು.
ರೇರಾ ಈಗ ಕಲೆಕ್ಷನ್ ಸೆಂಟರ್ ಆಗಿದೆ. ಒಂದು ಅಡುಗೆಮನೆಗೆ 15,000 ರೂ. ನಿಗದಿ ಮಾಡಲಾಗಿದೆ. ಅದಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲ. ನಿಯಮ ತಂದರೆ ಅದನ್ನು ವಸೂಲಿಗೆ ಬಳಸಿದ್ದಾರೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ 6 ಪ್ರೆಸ್‌ಮೀಟ್ ಮಾಡಿ ರಸ್ತೆ ಗುಂಡಿ ಮುಚ್ಚುತ್ತೇವೆ ಎಂದಿದ್ದಾರೆ. ಹಣ ಇಲ್ಲದೆ ಗುಂಡಿ ಮುಚ್ಚಿ ಎಂದರೆ ಯಾರೂ ಮುಚ್ಚುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರ 8,000 ಕೋಟಿ ರೂ. ಬಿಬಿಎಂಪಿಗೆ ನೀಡಿತ್ತು. ಬಿಡಿಎಯಿಂದ ವಿಶೇಷವಾಗಿ 6,000 ಕೋಟಿ ರೂ. ನೀಡಲಾಗಿತ್ತು. ಎರಡೂವರೆ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡದೆ ರಸ್ತೆಗಳು ಗುಂಡಿ ಬಿದ್ದಿವೆ. ಅಷ್ಟು ಗುಂಡಿಗಳನ್ನು ನವೆಂಬರ್ ಒಳಗೆ ಮುಚ್ಚುತ್ತೇವೆ ಎನ್ನುತ್ತಿದ್ದಾರೆ. ಅಷ್ಟು ದೊಡ್ಡ ಕಾಮಗಾರಿಯನ್ನು ಇಷ್ಟು ಬೇಗ ಮಾಡಲು ಸಾಧ್ಯವೇ ಇಲ್ಲ. ಇದು ಸಿಲಿಕಾನ್ ವ್ಯಾಲಿ ಅಲ್ಲ, ಗುಂಡಿಗಳ ವ್ಯಾಲಿ ಆಗಿದೆ ಎಂದು ದೂರಿದರು.
ಇಂದಿರಾಗಾಂಧಿಯವರ ಗರೀಬಿ ಹಟಾವೋ ಏನಾಗಿದೆ? ಕಾಂಗ್ರೆಸ್‌ನಿಂದಾಗಿ ಬಡತನ ನಿರ್ಮೂಲನೆ ಆಗಿಲ್ಲ. ಕೇಂದ್ರ ಸರ್ಕಾರದ ಕ್ರಮಗಳಿಂದಾಗಿ ನಮ್ಮಲ್ಲೇ ಉತ್ಪಾದನೆಯಾಗಿ ಬೇರೆ ದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಈಗ ಅಮೆರಿಕ ಕೂಡ ಭಾರತದ ಸ್ನೇಹ ಬಯಸುತ್ತಿದೆ. ಇದೇ ಪ್ರಧಾನಿ ಮೋದಿಯವರ ಶಕ್ತಿ ಎಂದರು.
ಮತಗಳ್ಳತನ ಆರೋಪ: ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿಲ್ಲವೇಕೆ?- ಸಿ.ಟಿ ರವಿ ಪ್ರಶ್ನೆ
ಮತಗಳ್ಳತನ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ- ಛಲವಾದಿ ನಾರಾಯಣಸ್ವಾಮಿ