ಹುಬ್ಬಳ್ಳಿ : ಈ ಬಾರಿ ಲೋಕಸಭೆ ಚುನಾವಣೆಯ ಬಳಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡು ಉತ್ತರ ಕರ್ನಾಟಕ ದವಾರು ಒಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ವಿಜಯಪುರ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದರು.
ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಅಮಿತ್ ಶಾ ಅವರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಡಿಕೆಶಿ ತಂಡ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ನಡುವೆಯೇ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಡಿಕೆಶಿ ಹಾಗೂ ಅವರ ತಂಡ ಪ್ರಯತ್ನಿಸಲಿದೆ.ಅದರ ಫಲವಾಗಿ ಸರ್ಕಾರವೇ ಪತನವಾಗಿ ಮರು ಚುನಾವಣೆಯಾಗುತ್ತದೆ.ಆನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಮುಂದೆ ನಮ್ಮದೇ ಸರ್ಕಾರ ಬಂದಾಗ ಉತ್ತರ ಕರ್ನಾಟಕದರೇ ಸಿಎಂ ಆಗುತ್ತಾರೆ. ಅಷ್ಟೇ ಅಲ್ಲ, ಯಾರು ಏನೇ ಲಾಗ ಹೊಡೆದರೂ ಇಡೀ ದೇಶದಲ್ಲಿ ಮುಸ್ಲಿಂ ಮೀಸಲಾತಿ ರದ್ದಾಗುತ್ತದೆ. ಹಾಗೆಂದು ಅಮಿತ್ ಶಾ ಅವರೇ ಹೇಳಿದ್ದಾರೆ. ಹಾಗಿರುವಾಗ ಅದು ಇಡೀ ದೇಶಾದ್ಯಂತ ಜಾರಿಯಾಗುತ್ತದೆ ಎಂದು ಹೇಳಿದ್ದಾರೆ ಎಂದರು.