ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಸೃಷ್ಟಿಸಿ, ಜನರಲ್ಲಿ ಭಯ ಉಂಟು ಮಾಡುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡದ ದಬ್ಬಾಳಿಕೆ ಸರ್ಕಾರವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಪ್ರಕರಣ ದಾಖಲಿಸಿ ಹೆದರಿಸುತ್ತಿದೆ. ಜನರ ಧ್ವನಿಯನ್ನು ಹತ್ತಿಕ್ಕಲು ಮುಂದಾಗುತ್ತಿದೆ. ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿಡುವ ಹಾಗೂ ದಲಿತ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಮಾತನಾಡದ ಸರ್ಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದರು.
ರಾಜ್ಯದಲ್ಲಿ ಭಯ ಹುಟ್ಟಿಸುವ ಹಲವಾರು ಘಟನೆಗಳು ಪದೇಪದೇ ನಡೆಯುತ್ತಿವೆ. ಶ್ರೀಕಾಂತ ಪೂಜಾರಿ ವಿರುದ್ಧ ಯಾವುದೇ ಪ್ರಕರಣ ಇಲ್ಲದಿದ್ದರೂ, ಅವರನ್ನು ಬಂಧಿಸಲಾಗಿತ್ತು. ಗಲಭೆ ಪ್ರಕರಣಕ್ಕೆ ಸಂಬಂಧಿಸಿಯೂ ಅವರ ಮೇಲೆ ಪ್ರಕರಣಗಳಿಲ್ಲ. ಪ್ರಕರಣಗಳಿಲ್ಲದೆ ಬಂಧಿಸಿ ಜೈಲಿಗೆ ಕಳುಹಿಸುವುದು ಎಮರ್ಜೆನ್ಸಿಯಲ್ಲಿ ಮಾತ್ರ ಆಗುತ್ತಿತ್ತು. ಅದೇ ಮಾದರಿ ಈಗ ನಡೆಯುತ್ತಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬಾರದು ಎನ್ನುವ ಕಾಂಗ್ರೆಸ್ ಕನಸು ಭಗ್ನ ಆಗುತ್ತಿದೆ. ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಆಡಳಿತದ ಎಲ್ಲ ರಾಜ್ಯಗಳಲ್ಲೂ ಹೀಗೆ ಗದ್ದಲ ಆಗುತ್ತಿದೆ ಎಂದರು.