ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಬೆಲೆ ಹೆಚ್ಚಳ ಮಾಡುವ ಪರ್ವ, ಬೆಲೆ ಹೆಚ್ಚಳದ ಅಭಿಯಾನವನ್ನು ಈ ಸರಕಾರ ತೆಗೆದುಕೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸರಕಾರವು ಕಣ್ಣಿದ್ದೂ ಕುರುಡಾಗಿದೆ. ಕಿವಿ ಇದ್ದರೂ ಕಿವುಡಾಗಿದೆ. ತಲೆ ಇದ್ದರೂ ಬುದ್ಧಿ ಭ್ರಮಣೆ ಆಗಿದೆ ಎಂದು ಆಕ್ಷೇಪಿಸಿದರು.

ಸರಕಾರದ ನೀತಿ, ನಿರ್ಧಾರ ಹಾಗೂ ಚಟುವಟಿಕೆಗಳನ್ನು ನೋಡಿದರೆ ಈ ಸರಕಾರಕ್ಕೆ ಮನುಷ್ಯತ್ವ ಇಲ್ಲ ಎಂದು ಯಾರಿಗಾದರೂ ಅನಿಸಿ, ಅದರ ಸ್ಪಷ್ಟ ಸೂಚನೆಗಳು ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಡೆಂಗ್ಯೂ ಮನೆ ಮನೆಗೆ ಹಬ್ಬುತ್ತಿದೆ. ಡೆಂಗ್ಯೂಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ. ವೈದ್ಯರು, ಔಷಧಿಯ ಲಭ್ಯತೆ ಇಲ್ಲ. ಡೆಂಗ್ಯೂ ಅವತಾರವನ್ನು ನಿಯಂತ್ರಿಸಲು, ಅದರ ಬಗ್ಗೆ ಮಾತನಾಡಲು ವೈದ್ಯಕೀಯ ಸಚಿವರು- ಆರೋಗ್ಯ ಸಚಿವರು ಎಲ್ಲಿ ಹೋಗಿದ್ದಾರೆ ಎಂಬುದನ್ನು ಹುಡುಕಬೇಕಾಗಿದೆ ಎಂದು ತಿಳಿಸಿದರು.

ಪಿಯುಸಿ, ಎಸ್ಸೆಸ್ಸೆಲ್ಸಿ, ಎಂಜಿನಿಯರಿಂಗ್, ವೈದ್ಯಕೀಯ ಸೇರಿ ಎಲ್ಲ ವಿದ್ಯಾರ್ಥಿಗಳ ಶುಲ್ಕ ಹೆಚ್ಚು ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಪೆಟ್ರೋಲ್-3 ರೂ., ಡೀಸೆಲ್- 3.50 ರೂ. ಬೆಲೆ ಹೆಚ್ಚಿಸಿದ್ದಾರೆ. ಎಲ್ಲರ ಮನೆಯಲ್ಲೂ ಹಸು ಇರಲಾರದು. ಆದರೆ, ಎಲ್ಲರ ಮನೆಯಲ್ಲಿ ದ್ವಿಚಕ್ರ ವಾಹನ ಇದ್ದೇ ಇದೆ. ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಬಿಸಿ ಎಲ್ಲರನ್ನೂ ತಟ್ಟಿದೆ ಎಂದು ಹೇಳಿದರು.

ಹಾಲಿನ ಬೆಲೆ ಹೆಚ್ಚಳದ ನಿರ್ಧಾರವನ್ನು ಈ ಸರಕಾರ ಮಾಡಿದ್ದು, ಇದು ಮನೆಮುರುಕ ನಿರ್ಣಯ ಎಂದು ಟೀಕಿಸಿದರು. ಹಾಲಿನ ದರ ಹೆಚ್ಚಳಕ್ಕೆ ಪ್ಯಾಕೆಟ್‍ಗೆ 50 ಎಂಎಲ್ ಹೆಚ್ಚು ಹಾಲು ಕೊಡಲಾಗುತ್ತಿದೆ ಎಂದು ಹೇಳುತ್ತಾರೆ. ಜÀನರಿಗೆ 50 ಎಂಎಲ್ ಹೆಚ್ಚು ಬೇಕೆಂದು ನಿಮ್ಮನ್ನು ಯಾರು ಕೇಳಿದ್ದಾರೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಕೇಳದೇ ಇರುವುದನ್ನು ಕೊಡುತ್ತೀರಲ್ಲವೇ? ಜನರು ಕೇಳುವುದನ್ನು ಮೊದಲು ಕೊಡಿ ಎಂದು ಆಗ್ರಹಿಸಿದರು. ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆ ಮಾಡುವಂತೆ ಜನರು ಕೇಳುತ್ತಿದ್ದಾರೆ. ಅದನ್ನು ಮೊದಲು ಮಾಡಿ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳಿಗೆ ಹಾಲು ಕರೆದು ನೀಡುವ ಪ್ರತಿಭಟನೆ

29ನೇ ತಾರೀಕು ರಾಜ್ಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಸು ಕರೆದುಕೊಂಡು ಹೋಗಿ ಹಾಲು ಕರೆದು ಜಿಲ್ಲಾಧಿಕಾರಿಗಳಿಗೆ ನೀಡಿ ವಿನೂತನ ಪ್ರತಿಭಟನೆಯನ್ನು ನಡೆಸಲಿದ್ದೇವೆ. ರಾಜ್ಯ ರೈತ ಮೋರ್ಚಾ ಘಟಕಗಳ ವತಿಯಿಂದ ವಿಭಿನ್ನ ಮಾದರಿಯ ಪ್ರತಿಭಟನೆ ಮಾಡಲಿದ್ದೇವೆ ಎಂದು ಎನ್.ರವಿಕುಮಾರ್ ಅವರು ತಿಳಿಸಿದರು.

ಟ್ರಾನ್ಸ್‍ಪೋರ್ಟ್ ಇಲ್ಲದೆ ಜೀವನ ನಡೆಯುವುದಿಲ್ಲ. ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಜೀವನದ ಮೇಲೆ ತೀವ್ರ ದುಷ್ಪರಿಣಾಮ ಆಗಿದೆ. ಮಾನವ ಜೀವನದ ಮೇಲೆ ಈ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿಗಳಿಗೆ ಮನುಷ್ಯತ್ವ ಇದ್ದರೆ ಈ ಸರಕಾರವು ಪೆಟ್ರೋಲ್- ಡೀಸೆಲ್ ಬೆಲೆ, ಹಾಲಿನ ದರ ಸೇರಿ ಏರಿಸಿದ ಎಲ್ಲ ದರವನ್ನೂ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಈ ಸರಕಾರ ದೀನ ದಲಿತರ ಪರ ಇಲ್ಲ. ಹಿಂದುಳಿದವರ ಪರ ಇಲ್ಲದ, ಸಾಮಾನ್ಯ ಜನರ ಪರ ಇಲ್ಲದ ಸರಕಾರ ಇದೆಂದು ದೂರಿದರು.

ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ..

ಈ ಸರಕಾರಕ್ಕೆ ಜ್ವರ ಬಂದರೆ ಕರ್ನಾಟಕದ ಜನತೆಗೆ ಬರೆ ಹಾಕುತ್ತಾರೆ. ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕಿದರು ಎಂಬ ಕನ್ನಡ ಗಾದೆಯಂತಿದೆ ಈ ಸರಕಾರದ ಕ್ರಮ ಎಂದು ಟೀಕಿಸಿದರು. ಇದು ಬರೆ ಹಾಕುವ, ಬೆಲೆ ಹೆಚ್ಚು ಮಾಡುವ ಸರಕಾರ ಎಂದು ರವಿಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದು ಜನರ ಅಹಿತ ಬಯಸುವ ಸಾಮಾನ್ಯ ಜನರ ವಿರೋಧಿ ಸರಕಾರ. ಹಾಲಿನ ದರ ಏರಿಕೆಯಿಂದ ಟೀ, ಕಾಫಿ ಬೆಲೆ ಹೆಚ್ಚಾಗಲಿದೆ. ಹೋಟೆಲ್‍ಗಳ ತಿಂಡಿಗಳ ದರ ಹೆಚ್ಚಳ ಆಗಲಿದೆ. ಇದರ ಪರಿಣಾಮ ಮತ್ತಷ್ಟು ಜನರ ಮೇಲೆ ಆಗಲಿದೆ ಎಂದು ವಿವರಿಸಿದರು.

ವಿಧಾನಪರಿಷತ್ ಸದಸ್ಯ ಹನುಮಂತ್ ನಿರಾಣಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ರುದ್ರೇಶ್, ಶ್ರೀಮತಿ ಭಾರತಿ ಮಲ್ಲಿಕಾರ್ಜುನ್, ಬ್ಯಾಡರಂಗೇ ಗೌಡ ಅವರು ಹಾಜರಿದ್ದರು.

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ : ಸ್ನಾತಕ/ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ : ಸ್ನಾತಕ/ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

Share.
Exit mobile version