ಮೈಸೂರು: ರಾಜ್ಯದ ಸಾವಿರಾರು ಬಗರ್ ಹುಕುಂ ಸಾಗುವಳಿದಾರ ರೈತರು ಸಾಗುವಳಿ ಪತ್ರವನ್ನು ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಗುಡ್ ನ್ಯೂಸ್ ಎನ್ನುವಂತೆ ರೈತರು ಸಾಗುವಳಿ ಚೀಟಿಗಾಗಿ ಸಲ್ಲಿಸಿರುವಂತ ಅರ್ಜಿಯನ್ನು 8 ತಿಂಗಳಲ್ಲಿ ಕ್ಲಿಯರ್ ಮಾಡುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಡೆಡ್ ಲೈನ್ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಗರ್‌ ಹುಕುಂ ಅರ್ಜಿಗಳ ವಿಲೇವಾರಿಗೆ ತಹಶೀಲ್ದಾರರಿಗೆ 8 ತಿಂಗಳ ಗಡುವು ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಬಡ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಕ್ರಮ ಸಾಗುವಳಿಯ ಸಕ್ರಮೀಕರಣಕ್ಕಾಗಿ ಬಗರ್‌ಹುಕುಂ ಅಡಿ ರಾಜ್ಯ ಸರ್ಕಾರ ಅರ್ಜಿ ಸ್ವೀಕರಿಸಿದೆ. ಲಕ್ಷಾಂತರ ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಮುಂದಿನ 8 ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು.

ರಾಜ್ಯಾದ್ಯಂತ 163 ಕ್ಷೇತ್ರಗಳಲ್ಲಿ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಲಾಗಿದೆ. ಜುಲೈ ತಿಂಗಳಿಂದ ಆರಂಭಿಸಿ ಪ್ರತಿ ತಿಂಗಳೂ ತಾಲೂಕವಾರು ತಿಂಗಳಿಗೆ ಇಷ್ಟು ಅರ್ಜಿ ವಿಲೇಗೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗೆ ಸೂಚಿಸಬೇಕು. ಶಾಸಕರ ನೇತೃತ್ವದ ಸಮಿತಿಯಲ್ಲಿ ತಹಶೀಲ್ದಾರರು ಈ ಎಲ್ಲಾ ಅರ್ಜಿಗಳಲ್ಲಿ ರೈತರಿಗೆ ಭೂ ಮಂಜೂರು ಮಾಡುವ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಅವರಿಗೆ ಆ ಜಾಗದ ಕಳೆದ 10 ವರ್ಷದ ಸ್ಯಾಟಲೈಟ್‌ ಇಮೇಜ್‌ ಒದಗಿಸಲಾಗುವುದು. ಇದರ ಆಧಾರದಲ್ಲಿ ಸಾಗುವಳಿ ಬಗ್ಗೆ ಖಾತರಿ ಪಡಿಸಿಕೊಂಡು, ಬೋಗಸ್‌ ಅರ್ಜಿಗಳಿಗೆ ಅವಕಾಶ ನೀಡದಂತೆ ಅರ್ಹ ರೈತರಿಗೆ ಭೂ ಮಂಜೂರು ಮಾಡಬೇಕು ಎಂದು ಸೂಚಿಸಲಾಗಿದೆ.

ಅಲ್ಲದೆ, ಬಡ ರೈತರಿಗೆ ಶೇ.100 ನೆಮ್ಮದಿ ನೀಡಬೇಕು ಮುಂದಿನ ದಿನಗಳಲ್ಲಿ ಅವರ ದಾಖಲೆಗಳ ಬಗ್ಗೆ ಸಾಸಿವೆ ಕಾಳಿನಷ್ಟೂ ಅನುಮಾನ ಇರಬಾರದು, ಕೋರ್ಟ್‌ ಕಚೇರಿ ಸುತ್ತುವಂತೆ ಆಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಬಗರ್‌ ಹುಕುಂ ಜಮೀನನ್ನು ದುರಸ್ಥಿಗೊಳಿಸಿ ಹೊಸ ಹಿಸ್ಸಾ ನಂಬರ್‌ ಜೊತೆಗೆ ಸಾಗುವಳಿ ಚೀಟಿಯನ್ನು ಡಿಜಿಟಲೀಕರಣ ಗೊಳಿಸಿ ನೀಡಬೇಕು ಹಾಗೂ ಭೂಮಿಯನ್ನು ಕ್ರಮ (ರಿಜಿಸ್ಟರ್) ಮಾಡಿ ರೈತರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

Watch Video: ‘ವಿಪಕ್ಷ ನಾಯಕ ರಾಹುಲ್ ಗಾಂಧಿ’ ಒಬ್ಬ ‘ಚೈಲ್ಡ್’ ಇದ್ದಂತೆ: ಪ್ರಧಾನಿ ಮೋದಿ | PM Modi

Watch Video: ‘ವಿಪಕ್ಷ ನಾಯಕ ರಾಹುಲ್ ಗಾಂಧಿ’ ಒಬ್ಬ ‘ಚೈಲ್ಡ್’ ಇದ್ದಂತೆ: ಪ್ರಧಾನಿ ಮೋದಿ | PM Modi

Share.
Exit mobile version