ಮಂಗಳೂರು: ಪ್ರದೇಶ ಕಾಂಗ್ರೆಸ್ ಪಕ್ಷ ಇದೀಗ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಕೇಂದ್ರದ ವಿರುದ್ಧ ‘ಓಟ್ ಚೋರಿ’ ಅಭಿಯಾನವನ್ನು ಬಿರುಸುಗೊಳಿಸಿರುವ ಕಾಂಗ್ರೆಸ್ ಪಕ್ಷ ಇದೀಗ ತನ್ನ ಈ ಹೋರಾಟವನ್ನು ಚುರುಕುಗೊಳಿಸಲು ‘ಲೀಗಲ್ ಬ್ಯಾಂಕ್’ ಅಸ್ತಿತ್ವಕ್ಕೆ ತಂದಿದೆ.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪರಿಕಲ್ಪನೆಯಂತೆ ಕರ್ನಾಟಕದಲ್ಲಿ ‘ಲೀಗಲ್ ಬ್ಯಾಂಕ್’ ಅಸ್ತಿತ್ವಕ್ಕೆ ಬಂದಿದೆ. ಪಕ್ಷ ಸಂಘಟನೆಗೆ ಕಾನೂನು ಶಕ್ತಿ ತುಂಬುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ದಕ್ಷಿಣ ಭಾರತದಲ್ಲೇ ಮೊದಲೆಂಬಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕ ಈ ‘ಲೀಗಲ್ ಬ್ಯಾಂಕ್’ ಸ್ಥಾಪಿಸಿ ಗಮನಸೆಳೆದಿದೆ. ಸುಮಾರು 250 ವಕೀಲರ ತಂಡ ಈ ‘ಲೀಗಲ್ ಬ್ಯಾಂಕ್’ ನಲ್ಲಿ ಕೈಜೋಡಿಸಿರುವುದು ವಿಶೇಷ.
ಕೇಂದ್ರದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಅನುಕೂಲವಾಗುವಂತೆ ಎಲ್ಲಾ ಪ್ರಾದೇಶಿಕ ಸಮಿತಿಗಳು (PCC) ಹಾಗೂ ಜಿಲ್ಲಾ ಸಮಿತಿ (PCC), ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ‘ಲೀಗಲ್ ಬ್ಯಾಂಕ್’ ಸ್ಥಾಪಿಸಬೇಕೆಂಬುದು ರಾಹುಲ್ ಗಾಂಧಿಯವರ ಪರಿಕಲ್ಪನೆ. ಅವರ ಈ ಸೂತ್ರವನ್ನು ಅನುಷ್ಠಾನಗೊಳಿಸುವ ಸಂಬಂಧ ಎಐಸಿಸಿ ಕಾನೂನು ಘಟಕದ ಪ್ರಮುಖರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರೂ ಆದ ಸಲ್ಮಾನ್ ಖುರ್ಷಿದ್ ಅವರು ಇತ್ತೀಚಿಗೆ KPCC ಕಾನೂನು ಘಟಕದ ಅಧ್ಯಕ್ಷ CM ಧನಂಜಯ್, ದ.ಕ.ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್, ಕರ್ನಾಟಕ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಬಾಬು, ಮುನಿಯಪ್ಪ ಅವರೊಂದಿಗೆ ಕಾರ್ಯತಂತ್ರ ರೂಪಿಸಿದ್ದರು.
ಹೈಕಮಾಂಡ್ ಮಾರ್ಗದರ್ಶನದಂತೆ ಮಂಗಳೂರಿನ ಮಾಜಿ ಜಿಲ್ಲಾ ಸರ್ಕಾರಿ ವಕೀಲ ಮನೋರಾಜ್ ರಾಜೀವ್ ನೇತೃತ್ವದಲ್ಲಿ ‘ಲೀಗಲ್ ಬ್ಯಾಂಕ್’ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ 250ಕ್ಕೂ ಹೆಚ್ಚು ಮಂದಿ ವಕೀಲರು ಕೈಜೋಡಿಸಿದ್ದು, ಈ ನ್ಯಾಯವಾದಿಗಳ ತಂಡ ಶನಿವಾರ ಮಂಗಳೂರಿನ ಖಾಸಗಿ ಹೋಟೆಲ್’ನಲ್ಲಿ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚಿಂತನ-ಮಂಥನ ನಡೆಸಿದೆ. ಮಾಜಿ ಸಚಿವ ರಮಾನಾಥ ರೈ, ಹಿರಿಯ ಕಾನೂನು ತಜ್ಞರಾದ ಮನೋರಾಜ್ ರಾಜೀವ್, ಶ್ರೀನಿವಾಸ ಬಾಬು, ಮುನಿಯಪ್ಪ, ಮಾಜಿ ಸಂಸದ ಬಿ.ಇಬ್ರಾಹಿಂ ಮೊದಲಾದವರು ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ‘ಲೀಗಲ್ ಡೈರೆಕ್ಟರಿ’ಯನ್ನೂ ಬಿಡುಗಡೆ ಮಾಡಲಾಗಿದೆ ಎಂದು DCC ಕಾನೂನು ಘಟಕದ ಅಧ್ಯಕ್ಷರಾಗಿರುವ ಮನೋರಾಜ್ ರಾಜೀವ್ ತಿಳಿಸಿದ್ದಾರೆ. ಪ್ರಸಕ್ತ 250 ವಕೀಲರು ಲೀಗಲ್ ಬ್ಯಾಂಕ್ ನಲ್ಲಿ ಭಾಗಿಯಾಗಿದ್ದು, ಮತ್ತಷ್ಟು ಮಂದಿ ಸೇರ್ಪಡೆಯಾಗಲಿದ್ದಾರೆ ಎಂದು ಮನೋರಾಜ್ ತಿಳಿಸಿದ್ದಾರೆ.
ಕೆಪಿಸಿಸಿ ಮೆಚ್ಚುಗೆ:
ರಾಜ್ಯದಲ್ಲಿ ಮೊದಲು ಎಂಬಂತೆ ದಕ್ಷಿಣ ಕನ್ನಡದಲ್ಲಿ ‘ಲೀಗಲ್ ಬ್ಯಾಂಕ್’ ಅಸ್ತಿತ್ವಕ್ಕೆ ಬಂದಿರುವ ಬಗ್ಗೆ ಕೆಪಿಸಿಸಿ ಕನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಎಲ್ಲಾ ಜಿಲ್ಲೆಗಳಲ್ಲೂ ‘ಲೀಗಲ್ ಬ್ಯಾಂಕ್’ ಹಾಗೂ ‘ಲಾಯರ್ ಡೈರೆಕ್ಟರಿ’ ಸಿದ್ಧಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಮಂಗಳೂರು ತಂಡದ ಈ ಸಾಧನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ನಾಯಕರಿಗೆ ವರದಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಕೀಲರಾದ ವಸಂತ್ ಕಾರಂದೂರು, ವಸಂತ್, ಲೋಕೇಶ್, ಬಿ.ಗಂಗಾಧರ್, ಮಹಮ್ಮೆದ್ ಹನೀಫ್, ವೆಲೆಂಟೈಲ್ ಡಿಸಿಲ್ವಾ, ಸುಬ್ಬಯ್ಯ ರೈ, ಅಶ್ವಿನ್ ಕುಮಾರ್ ರೈ, ರಾಜೇಂದ್ರ ರಾವ್ ಮಾಣಿಪ್ಪಾಡಿ, ಎಸಿ ಗೋಪಾಲ್, ಮಾರಿಯಮ್ಮ ಥಾಮಸ್, ರಕ್ಷಿತ್ ಶಿವರಾಂ, ಎಂ.ಜಿ.ನವೀನ ಕುಮಾರ್, ಶಿವರಾಂ ಆಳ್ವ, ಮನೋಜ್ ಆಳ್ವ, ಅವಿನಾಶ್ ಬೈತಡ್ಕ, ಸುರೇಶ ನಾವೂರ್, ಪದ್ಮಪ್ರಸಾದ್ ಜೈನ್, ದಿನೇಶ್ ಭಂಡಾರಿ, ಅರುಣ್ ಬಂಗೇರ, ಮುಝಫರ್ ಅಹ್ಮದ್, ವಿಜಯ ಸುವರ್ಣ, ಕೆ.ಪ್ರಕಾಶ್ ಶೆಣೈ, ಕೆ.ಪ್ರಕಾಶ್, ಶಾಶ್ವತ ಪೈ, ರೋಶ್ನಿ ಸೊರಬ್, ಶಿಶಿರ್ ಭಂಡಾರಿ, ನಂದಿನಿ ಅಖಿಲ್, ಲೋಲಾಕ್ಷಿ, ವಿಜಯಶ್ರೀ, ಅಕ್ಷಿತಾ ಕೋಟ್ಯಾನ್, ಸೊರಬರ್ ಫಾತಿಮಾ, ರವಿ ಕಿರಣ್, ಗೋಪಾಲ್, ದೀಪ್ ರಾಜ್ ಅಂಬಟ್, ಲ್ಯಾನ್ಸ್ ಲಾಟ್ ಡಿಸೋಜ, ಮೆಲ್ವಿನ್ ಮೆಸ್ಕರೇನಸ್, ಡೇನಿಯಲ್ ಮೆಸ್ಕರೇನಸ್, ರಾಜೇಶ್ ರೈ ಹಾಗೂ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಕಾನೂನು ಘಟಕಗಳ ಅಧ್ಯಕ್ಷರಾದ ಅರುಣ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮೆರ್ವಿನ್, ಸೇವಿಯರ್ ಪಾಲೆಲಿ, ಜಗದೀಶ್ ಹುದ್ದೇರಿ, ಸುರೇಶ ಪೂಜಾರಿ, ನವೀನ್ ಪಾಯಸ್ ಮೊದಲಾದವರು ಉಪಸ್ಥಿತರಿದ್ದರು.








