ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಾಡಿದಂತೆ ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಹಣ, ಗಿಫ್ಟ್ ಗಳನ್ನು ಹಂಚಿ ಗೆಲುವು ಸಾಧಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ನಡೆದ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕುರಿತ ಜೆಡಿಎಸ್ -ಬಿಜೆಪಿ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಅವರು ಮತನಾಡಿದರು.ಶಿಕ್ಷಕರು, ಪದವೀಧರರು ಮತ ಹಾಕುವ ಈ ಚುನಾವಣೆಯನ್ನು ಕಾಂಗ್ರೆಸ್ ಕಲುಷಿತಗೊಳಿಸುತ್ತಿದೆ. ಹಣ, ಗಿಫ್ಟ್, ಕೂಪನ್ ಹಂಚುವ ಕೆಲಸವನ್ನು ಯಥೇಚ್ಛವಾಗಿ ಮಾಡುತ್ತಿದೆ. ಈಗಾಗಲೇ ಅಧಿಕಾರಿಗಳು ಅನೇಕ ಕಡೆ ದಾಳಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಹಂಚುತ್ತಿದ್ದ ಗಿಫ್ಟ್ ಬಾಕ್ಸ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಹಣದ ಆಮಿಷ ಒಡ್ಡಿ ಮತ ಪಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾವಂತರಾದ ಪದವೀಧರರು ತಕ್ಕ ಪಾಠ ಕಲಿಸಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಈ ಷಡ್ಯಂತ್ರಕನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಎರಡು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಎದುರಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಕರೆ ನೀಡಿದರು.ಜೆಡಿಎಸ್ -ಬಿಜೆಪಿ ಮೈತ್ರಿ ಐತಿಹಾಸಿಕ. ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೆಗೌಡರ ನೇತೃತ್ವದಲ್ಲಿ ಆಗಿರುವ ಈ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಗೆ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು
ಬೆಂಗಳೂರು ಜನರು ಗಮನಿಸಬೇಕು. ಈ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆ ನಿಗಾ ಇಡಬೇಕು. ಹೋದ ವರ್ಷವೂ ಮಳೆ ಬಂತು, ಮನೆಗಳಿಗೆ ನೀರು ನುಗ್ಗಿತು. ಈ ವರ್ಷವೂ ಮಳೆ ಬಂತು. ಮನೆಗಳಿಗೆ ನೀರು ನುಗ್ಗಿದೆ. ಜನರು ಮನೆ ಖಾಲಿ ಮಾಡಿ ಹೋಟೆಲ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆ ಯಾವತ್ತೊ ಬಿಡಿಎ ಕಚೇರಿಯಲ್ಲಿ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರೆ. ಏನಕ್ಕೆ ಆ ಸಭೆ? ಲೂಟಿ ಹೊಡೆಯೋದಕ್ಕಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.ಬೆಂಗಳೂರು ನಗರದ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುತ್ತಿದೆ. ಕಳೆದ ಒಂದು ವರ್ಷದಿಂದ ಒಂದೇ ಒಂದು ಕಾಮಗಾರಿ ಬೆಂಗಳೂರಿನಲ್ಲಿ ಆಗಿಲ್ಲ. ಅಭಿವೃದ್ಧಿ ಕೆಲಸ ನಿಂತು ಹೋಗಿದೆ. ಗ್ಯಾರಂಟಿಗಳ ಮಾತ್ರ ಕಡೆ ಗಮನ ಕೊಟ್ಟು ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.
ಅನ್ನಭಾಗ್ಯ ಅಕ್ಕಿ ಹಣ ಕೊಟ್ಟಿಲ್ಲ
ಗ್ಯಾರಂಟಿಗಳಿಂದ ಜನರನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿರುವ ಈ ಸರಕಾರಕ್ಕೆ ಅನ್ನಭಾಗ್ಯದ 175 ರೂಪಾಯಿ ಹಣ ಕೊಡುವ ಯೋಗ್ಯತೆ ಇಲ್ಲ. ಎರಡು ಮೂರು ತಿಂಗಳಿಂದ ಇವರಿಂದ ಹಣ ಕೊಡಲು ಆಗಿಲ್ಲ, ಯಾವ ಕುಟುಂಬಕ್ಕೂ ಹಣ ಕೊಟ್ಟಿಲ್ಲ, ಹಾಲು ಉತ್ಪಾದಕರ ಸಹಾಯಧನ ಕೊಟ್ಟಿಲ್ಲ, ಮಳೆ ಬರುತ್ತಿದೆ, ಬಿತ್ತನೆ ಬೀಜ ದುಬಾರಿ ಆಗಿದೆ. ಬಿತ್ತನೆ ಬೀಜದ ಬೆಲೆ 75% ಏರಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಇವರು ಸುಳ್ಳು ಹೇಳುತ್ತಿದ್ದಾರೆ. ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಸರಕಾರ ಎಂದು ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ನಡೆಸಿದರು ಅವರು.
ರಾಜ್ಯದಲ್ಲಿ 2.75 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಖಾಲಿ ಇರುವ 30 ಲಕ್ಷ ಸರಕಾರಿ ಹುದ್ದೆ ತುಂಬುತ್ತಾರಂತೆ! ಮೊದಲು ಕರ್ನಾಟಕದಲ್ಲಿ ಭರ್ತಿ ಮಾಡಿ, ಆಮೇಲೆ ದೇಶದ ಕಥೆ ನೋಡೋಣ ಎಂದು ತಿರುಗೇಟು ಕೊಟ್ಟರು ಕುಮಾರಸ್ವಾಮಿ.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ; ಪರಿಷತ್ ಗೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ರಾಜ್ಯಕ್ಕೆ ಸಂದೇಶ ಕೊಡಬೇಕು. ಮೈತ್ರಿಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.ನಿರುದ್ಯೋಗಿ ಯುವಕರಿಗೆ ಮಾಸಕ ಮೂರು ಸಾವಿರ ರೂಪಾಯಿ ಕೊಡುವ ಯುವನಿಧಿ ಯೋಜನೆಗೆ ಕೂಡ ಷರತ್ತುಗಳನ್ನು ಹಾಕಿದ್ದಾರೆ. ಮೊದಲು ಎಲ್ಲರಿಗೂ ಹಣ ಕೊಡುತ್ತೇವೆ ಎಂದವರು ಈಗ 2022-2 3ನೇ ಸಾಲಿನಲ್ಲಿ ಪಾಸಾದವರಿಗೆ ಮಾತ್ರ ಎನ್ನುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅ.ದೇವೇಗೌಡರು ಮಾತ್ರ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ. ಉಳಿದ ಅಭ್ಯರ್ಥಿಗಳಿಗೂ ನಮಗೂ ಸಂಬಂಧವಿಲ್ಲ. ಆದರೆ, ನಮ್ಮ ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲದ ಚನ್ನಪಟ್ಟಣದ ಪುಟ್ಟಸ್ವಾಮಿ ಎನ್ನುವರು ನನ್ನ ಮತ್ತು ದೇವೆಗೌಡರ ಚಿತ್ರಗಳನ್ನು ಕರಪತ್ರಗಳಲ್ಲಿ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿದೆ. ಅಲ್ಲದೇ, ನಾನು ಮತ್ತು ದೇವೇಗೌಡರು ತಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಅವರು ಹೇಳಿಕೊಂಡು ತಿರುಗುತ್ತಿದ್ದಾರೆ.
ಈ ರೀತಿ ನಾನಾಗಲಿ, ದೇವೇಗೌಡರಾಗಲಿ ಯಾರಿಗೂ ಬೆಂಬಲ ನೀಡಿರುವುದಿಲ್ಲ. ಅವರು ತಕ್ಷಣ ನಮ್ಮ ಹೆಸರು, ಭಾವಚಿತ್ರಗಳನ್ನು ಬಳಸುವುದನ್ನು ನಿಲ್ಲಿಸಬೇಕು. ತಪ್ಪಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.ಇದಕ್ಕೂ ಮುನ್ನ ಸಭೆಯ ಗಮನಕ್ಕೆ ಈ ವಿಷಯ ತಂದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ; ಔಟ್ಟಸ್ವಾಮಿಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ದೇವೇಗೌಡರು, ಕುಮಾರಸ್ವಾಮಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುವುದು ಅಪರಾಧ ಎಂದು ಎಚ್ಚರಿಕೆ ಕೊಟ್ಟರು.