ಬೆಂಗಳೂರು: “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಚುನಾವಣಾ ದಿನಾಂಕ ಪ್ರಕಟ ಸಂಬಂಧ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, “ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಇಲ್ಲಿ ನಾವು ಹೋರಾಟ ಮಾಡಬೇಕು. ಅದನ್ನು ಸಂಭ್ರಮಿಸಿ, ಆನಂದಿಸಬೇಕು. ನಾವು ಮಾಡಿರುವ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು 20ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ನಾವು ನಮ್ಮ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದ್ದೇವೆ.
ಭಾರತ ಜೋಡೋ ಯಾತ್ರೆ ಸಮಾರೋಪ ಹಾಗೂ ಇಂಡಿಯಾ ಒಕ್ಕೂಟ ಸಭೆ ಹಿನ್ನೆಲೆಯಲ್ಲಿ ಸಿಇಸಿ ಸಭೆ ಮುಂದೂಡಲಾಗಿದೆ. 19ರಂದು ಈ ಸಭೆ ನಡೆಯುವ ಸಾಧ್ಯತೆ ಇದೆ. ನಂತರ ಉಳಿದ ಅಭ್ಯರ್ಥಿ ಅಂತಿಮ ಮಾಡಲಾಗುವುದು. ನೀವು ಬಿಜೆಪಿಯಲ್ಲಿ ನೋಡುತ್ತಿರುವ ಭಿನ್ನಮತ ಕಾಂಗ್ರೆಸ್ ಪಕ್ಷದಲ್ಲಿ ಆಗುವುದಿಲ್ಲ.
ಇದು ದೇವೇಗೌಡರ ಕುಟುಂಬದ ವಿರುದ್ಧದ ಮೊದಲ ಹೋರಾಟವಲ್ಲ:
ಇದು ಕುಟುಂಬದ ನಡುವಣ ಯುದ್ಧವೋ ಅಥವಾ ಸಿದ್ಧಾಂತ ನಡುವಣ ಯುದ್ಧವೋ ಎಂದು ಕೇಳಿದಾಗ, “ನಾವು ದೇವೇಗೌಡ ಕುಟುಂಬದ ವಿರುದ್ಧ ಅನೇಕ ಬಾರಿ ಹೋರಾಟ ಮಾಡಿದ್ದೇವೆ. ನಾನು ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಎದುರಿಸಿ ಸೋಲಿಸಿದ್ದೇವೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಎದುರಿಸಿದ್ದೇವೆ” ಎಂದು ತಿಳಿಸಿದರು.
ಮಂಜುನಾಥ್ ಅವರು ಈ ಚುನಾವಣೆಯನ್ನು ಧರ್ಮ ಯುದ್ಧ ಎಂದು ಹೇಳಿದ್ದಾರೆ ಎಂದು ಕೇಳಿದಾಗ, “ಇದೆಲ್ಲದರ ಬಗ್ಗೆ ಚುನಾವಣೆ ವೇದಿಕೆಯಲ್ಲಿ ಮಾತನಾಡೋಣ” ಎಂದು ತಿಳಿಸಿದರು.
ಜೆಡಿಎಸ್ ಮೇಲೆ ನಂಬಿಕೆ ಇಲ್ಲದಕ್ಕೆ ಮಂಜುನಾಥ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಜೆಡಿಎಸ್ ಪರಿಸ್ಥಿತಿ ನೋಡಿ ಅಯ್ಯೋ ಎನಿಸುತ್ತದೆ. ಅವರಿಗೆ ಅವರ ಪಕ್ಷದ ಮೇಲೆ ನಂಬಿಕೆಯಿಲ್ಲ. ಜೆಡಿಎಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಆಮೂಲಕ ಜೆಡಿಎಸ್ ಪಕ್ಷ ಇನ್ನು ಉಳಿದಿಲ್ಲ. ಹೀಗಾಗಿ ಆ ಪಕ್ಷದ ಕಾರ್ಯಕರ್ತರು ಯಾವುದೇ ಇತರೆ ರಾಜಕೀಯ ಪಕ್ಷ ಸೇರಲು ಮುಕ್ತರಾಗಿದ್ದಾರೆ” ಎಂದು ತಿಳಿಸಿದರು.
ಮಂಜುನಾಥ್ ಅವರು ಸುರೇಶ್ ಅವರಿಗೆ ಪ್ರಬಲ ಸ್ಪರ್ಧೆ ನೀಡುತ್ತಾರಾ ಎಂದು ಕೇಳಿದಾಗ, “ನಾವು ಈ ಹಿಂದೆಯೂ ಅನೇಕ ಚುನಾವಣೆ ಎದುರಿಸಿದ್ದೇವೆ. ನಮ್ಮ ಹೋರಾಟ ಮುನ್ನಡೆಸುತ್ತೇವೆ. ಸುರೇಶ್ ಪಂಚಾಯ್ತಿ ಸದಸ್ಯನಂತೆ ಹಳ್ಳಿಯಲ್ಲಿ ಕೆಲಸ ಮಾಡಿದ್ದಾರೆ. ತಳಮಟ್ಟದಲ್ಲಿ ಅವರಂತೆ ಕೆಲಸ ಮಾಡುವ ಮತ್ತೊಬ್ಬ ಸಂಸದ ಇಲ್ಲ. ಅವರು 200% ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ನಮಗೆ ಚುನಾವಣಾ ಬಾಂಡ್ ಕೊಡುವವರು ಇಲ್ಲ
ಆಯೋಗ ಚುನಾವಣಾ ವೆಚ್ಚವನ್ನು 80 ಲಕ್ಷಕ್ಕೆ ಮಿತಿ ಹೇರಿದೆ ಎಂದು ಕೇಳಿದಾಗ, “ಚುನಾವಣೆಗೆ ಅಷ್ಟು ಬೇಕಾಗುತ್ತದೆ. ನಮಗೆ ಯಾರು ಚುನಾವಣಾ ಬಾಂಡ್ ಹಾಗೂ ಹಣ ನೀಡುವವರಿಲ್ಲ” ಎಂದು ತಿಳಿಸಿದರು.
ನಕಲಿ ಮತದಾರರ ಪಟ್ಟಿಯನ್ನು ಹೇಗೆ ಕಡಿವಾಣ ಹಾಕುತ್ತೀರಿ ಎಂದು ಕೇಳಿದಾಗ, “ಈಗಲೂ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ಕ್ಷೇತ್ರಗಳಲ್ಲಿ 40 ಸಾವಿರ ಮತಗಳು ಹೆಚ್ಚಾಗಿವೆ. ಆನ್ಲೈನ್ ಮೂಲಕ ಆಗಿರುವ ಈ ನೋಂದಣಿಯನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಎರಡು ಹಂತದಲ್ಲಿ ನಡೆಯಲಿರುವ ಚುನಾವಣೆ ಬಗ್ಗೆ ಕೇಳಿದಾಗ, “ಈ ಹಿಂದೆಯೂ ಎರಡು ಹಂತದ ಚುನಾವಣೆ ಎದುರಿಸಿದ್ದೇವು. ಈಗಲೂ ಅದೇ ರೀತಿ ಆಗಿದೆ” ಎಂದು ತಿಳಿಸಿದರು.
ಪ್ರಧಾನಮಂತ್ರಿಗಳ ಅನುಕೂಲಕ್ಕೆ ಮಹಾರಾಷ್ಟ್ರದಲ್ಲಿ ಐದು ಹಂತಗಳ ಚುನಾವಣೆ ನಡೆಯಲಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿ ಅಧಿಕಾರದಲ್ಲಿ ಇದ್ದಾಗ ತಮಗೆ ಅನುಕೂಲವಾಗುವಂತೆ ದಿನಾಂಕ ನಿಗದಿ ಮಾಡುತ್ತಾರೆ. ಈ ಬಗ್ಗೆ ಆರೋಪ ಮಾಡುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ನಾವು ನಮ್ಮ ತಯಾರಿ ಮಾಡೋಣ” ಎಂದರು.
ಎರಡೂವರೆ ತಿಂಗಳು ಈ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ನೀತಿ ಸಂಹಿತೆ ಪರಿಣಾಮ ನಮ್ಮ ಚುನಾವಣೆ ಮುಕ್ತಾಯದ ನಂತರ ರಾಜಕೀಯ ನಿರ್ಧಾರ ಮಾಡುವಂತಿಲ್ಲ. ನಾವು ಅಭಿವೃದ್ಧಿ ಕೆಲಸ ಮುಂದುವರಿಸುತ್ತೇವೆ. ಕುಡಿಯುವ ನೀರು ಪೂರೈಕೆ ಸೇರಿದಂತೆ ಬೇರೆ ವಿಚಾರದಲ್ಲಿ ತೊಂದರೆ ಆಗುವುದಿಲ್ಲ” ಎಂದು ತಿಳಿಸಿದರು.
ತಪ್ಪು ಮಾಹಿತಿ ವಿಚಾರವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಚುನಾವಣಾ ಆಯೋಗದ ಎಚ್ಚರಿಕೆ ಬಗ್ಗೆ ಕೇಳಿದಾಗ, “ನಾನೂ ಈ ವಿಚಾರ ಗಮನಿಸಿದೆ. ಕೆಲವರು ಸುಳ್ಳು ಆರೋಪ ಮಾಡಿ ತಪ್ಪುದಾರಿಗೆಳೆಯುವ ಪ್ರಯತ್ನ ಮಾಡುತ್ತಾರೆ. ದ್ವೇಷ ಭಾಷಣ ಮಾಡುವುದು ನಡೆಯುತ್ತದೆ. ನೀತಿ ಸಂಹಿತೆ ಉಲ್ಲಂಘನೆ ನಡೆಯಲಿದ್ದು, ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇನ್ನು ಪ್ರಚಾರದಲ್ಲಿ ಮಕ್ಕಳ ಬಳಕೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ನಾವು ಮಕ್ಕಳನ್ನು ಪ್ರಚಾರಕ್ಕೆ ಬಳಸುವುದಿಲ್ಲ. ಆದರೆ ಕೆಲವು ಹಳ್ಳಿಗಳಲ್ಲಿ ಮೆರವಣಿಗೆ ಹೋಗುವಾಗ ಕೆಲವು ಮಕ್ಕಳು ಬಾವುಟ ಹಿಡಿದು ಬರುತ್ತಾರೆ. ನಾವು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ನಾವು ಕಾರ್ಯಕರ್ತರಿಗೆ ಸೂಚಿಸಿದ್ದೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರಿಗೂ ಬೇಡವಾಗಿದೆ ಎಂಬ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಕಾರಣಕ್ಕೆ ಅವರ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ಕೊಟ್ಟ ನಂತರ ಮಾಜಿ ಡಿಸಿಎಂ ಅವರಿಗೂ ಬಾಂಧವ್ಯ ಬಹಳ ನಡೆಯುತ್ತಿದೆ” ಎಂದು ತಿಳಿಸಿದರು.
ಕೊನೆ ಗಳಿಗೆಯಲ್ಲಿ ಆಪರೇಶನ್ ನಡೆಯುತ್ತಿದೆಯೇ ಎಂದು ಕೇಳಿದಾಗ, “ಇಲ್ಲ ಎಂದು ಹೇಳುವುದಿಲ್ಲ. ನಮ್ಮ ಪಕ್ಷದಿಂದ ಯಾರೂ ಹೋಗುತ್ತಿಲ್ಲ. ಈ ಬಗ್ಗೆ ನಾನು ಏಕಾಂಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.
ಇವಿಎಂ ತಿರುಚಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯುಕ್ತರ ಹೇಳಿಕೆ ಬಗ್ಗೆ ಕೇಳಿದಾಗ, “ಇಲ್ಲಿ ವ್ಯವಸ್ಥೆ ಮೇಲೆ ಪ್ರಶ್ನೆ ಮೂಡುತ್ತದೆ. ಮಧ್ಯಪ್ರದೇಶದಲ್ಲಿ ಪ್ರಜ್ಞಾವಂತ ಮತದಾರರು 75% ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು. ಫಲಿತಾಂಶ ಬಂದಾಗ ಬಿಜೆಪಿ ಅಭ್ಯರ್ಥಿಗಳೇ ಅಚ್ಚರಿಗೊಂದರು” ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ ಪ್ರವಾಸ ರಾಜ್ಯದಲ್ಲಿ ಪ್ರಭಾವ ಬೀರಲಿದೆಯೆ ಎಂದು ಕೇಳಿದಾಗ, “ಕಳೆದ ವರ್ಷ ರಾಜ್ಯದಲ್ಲಿ ಯಾವ ಪರಿಣಾಮ ಬೀರಿತ್ತು ಎಂದು ನೋಡಿದ್ದೇವೆ. ಪ್ರಧಾನಮಂತ್ರಿಗಳು ರಾಜ್ಯದ ಬೀದಿ ಬೀದಿ ಸುತ್ತಿದರು. ಈಗಲೂ ಅದೇ ರೀತಿಯ ಫಲಿತಾಂಶ ಬರಲಿದೆ” ಎಂದು ತಿಳಿಸಿದರು.
ಲೋಕಸಭಾ ಚುನಾವಣೆ : ಮಣಿಪುರ ಗಲಭೆಯ ಸಂತ್ರಸ್ತರಿಗೆ ನಿರಾಶ್ರಿತ ಕೇಂದ್ರದಿಂದಲೇ ಮತದಾನಕ್ಕೆ ಅವಕಾಶ!
BREAKING : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಪ್ಲೈಓವರ್‌ನಿಂದ ಬಿದ್ದು ಚಾಲಕ ಸಾವು